ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದೋರ್-ದೆಹಲಿ ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಮಹಿಳೆಯೊಬ್ಬಳು ಕೋಪದಿಂದ ಕಿಟಕಿಯನ್ನು ಒಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಬುಧವಾರ ನಡೆದಿದೆ ಎಂದು ವರದಿಗಳು ತಿಳಿಸಿವೆ. ಪ್ರಯಾಣದ ಸಮಯದಲ್ಲಿ ಆಕೆಯ ಪರ್ಸ್ ಕಳವಾಗಿದೆಯೆಂಬ ಕಾರಣದಿಂದ ಮಹಿಳೆ ತೀವ್ರ ಆಕ್ರೋಶಗೊಂಡು ರೈಲು ಕಿಟಕಿಯನ್ನು ಒಡೆದಿದ್ದಾಳೆ.
ವೈರಲ್ ವಿಡಿಯೋದಲ್ಲಿ ಮಹಿಳೆ ತನ್ನ ಪಕ್ಕದಲ್ಲಿ ಕೂತಿರುವ ಚಿಕ್ಕ ಮಗುವಿನ ಮುಂದೆ ಟ್ರೇನ ಸಹಾಯದಿಂದ ರೈಲು ಕಿಟಕಿಗೆ ಹಲವಾರು ಬಾರಿ ಹೊಡೆದು ಅದನ್ನು ಒಡೆದುಹಾಕಿದ್ದಾಳೆ.
ಮಹಿಳೆ ಮೊದಲು ರೈಲ್ವೆ ರಕ್ಷಣಾ ಪಡೆಯ (RPF) ಸಹಾಯಕ್ಕಾಗಿ ಮೊರೆಹೋದರೂ ಅಧಿಕಾರಿಗಳು ತಮಗೆ ಸ್ಪಂದಿಸಿಲ್ಲ ಎಂದು ಆಕೆ ಆರೋಪಿಸಿದ್ದಾಳೆ. ಬಳಿಕ ಕೋಪಗೊಂಡ ಆಕೆ ಟ್ರೇ ನಿಂದ ಕಿಟಕಿ ಒಡೆದಿದ್ದಾಳೆ. ವಿಡಿಯೋದಲ್ಲಿ ಆಕೆ “ಮೇರಾ ಪರ್ಸ್ ಚಾಹಿಯೇ… ಬಾತ್ ಖತಮ್!” ಎಂದು ಕೂಗುತ್ತಾ ಕಿಟಕಿಗೆ ಹೊಡೆದಿರುವುದು ಕಾಣಬಹುದು. ಈ ವೇಳೆ ರೈಲು ಸಿಬ್ಬಂದಿ ಹಾಗೂ ಪ್ರಯಾಣಿಕರು ಆಕೆಯನ್ನು ತಡೆಯಲು ಯತ್ನಿಸಿದರೂ ಯಶಸ್ವಿಯಾಗಿಲ್ಲ. ಗಾಜು ಒಡೆಯುವ ವೇಳೆ ಆಕೆಯ ಕೈಗಳಿಗೆ ಗಾಯಗಳಾಗಿದ್ದರೂ, ಆಕೆ ನಿಲ್ಲದೆ ಮುಂದುವರಿಸಿದ್ದಾಳೆ. ಪಕ್ಕದಲ್ಲಿದ್ದ ಚಿಕ್ಕ ಮಗುವಿನ ಸುರಕ್ಷತೆ ಬಗ್ಗೆ ಕೂಡ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮಹಿಳೆಯ ಕೋಪವನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.
ಇದೀಗ ತನಕ ರೈಲ್ವೆ ಅಧಿಕಾರಿಗಳಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ ಈ ಘಟನೆ ರೈಲು ಪ್ರಯಾಣಿಕರ ಸುರಕ್ಷತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿಚಾರವನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ.

