January22, 2026
Thursday, January 22, 2026
spot_img

Viral | ಸ್ಟೇಜ್ ಮೇಲೆ ಕೂತು ಮುಖದ ಹತ್ತಿರ ಬಂದು ಮಾತನಾಡಿದ ವ್ಯಕ್ತಿ: ಖಡಕ್ ತಿರುಗೇಟು ಕೊಟ್ಟ ಸಂಸದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಾಜವಾದಿ ಪಕ್ಷದ ಸಂಸದೆ ಹಾಗೂ ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರ ನಿಶ್ಚಿತಾರ್ಥದ ಸುದ್ದಿಯಿಂದ ಇತ್ತೀಚೆಗೆ ಗಮನ ಸೆಳೆದಿರುವ ಪ್ರಿಯಾ ಸರೋಜ್, ಈಗ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಡೆದ ಅಸಹಜ ಘಟನೆಯಿಂದ ಸುದ್ದಿಯಾಗಿದ್ದಾರೆ. ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಆಯೋಜಿಸಿದ್ದ ದಂಗಲ್ (ಕುಸ್ತಿ) ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿತರಾಗಿದ್ದ ವೇಳೆ, ಪ್ರಿಯಾ ಸರೋಜ್ ಎದುರಿಸಿದ ಅಸಹಜ ಅನುಭವದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೇದಿಕೆಯಲ್ಲಿ ಪ್ರಿಯಾ ಸರೋಜ್ ಕುಳಿತಿದ್ದಾಗ, ಪಕ್ಕದಲ್ಲಿದ್ದ ಖಾಲಿ ಕುರ್ಚಿಗೆ ವ್ಯಕ್ತಿಯೊಬ್ಬರು ಬಂದು ಕುಳಿತು, ಅವರ ಮುಖದ ಹತ್ತಿರವೇ ವಾಲಿ ಮಾತನಾಡಲು ಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಈ ವರ್ತನೆಗೆ ಅಸಹನೆಗೊಂಡ ಪ್ರಿಯಾ ಸರೋಜ್ ತಕ್ಷಣವೇ ಸ್ವಲ್ಪ ದೂರ ಸರಿದು, ಅಂತರ ಕಾಯ್ದುಕೊಂಡು ಮಾತನಾಡುವಂತೆ ಖಡಕ್ ಪದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ಅವರ ಸ್ಪಷ್ಟ ಪ್ರತಿಕ್ರಿಯೆ ಅಲ್ಲಿದ್ದವರ ಗಮನ ಸೆಳೆಯುವಂತಾಯಿತು.

ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕ ವೇದಿಕೆಗಳಲ್ಲಿ ಮಹಿಳಾ ಜನಪ್ರತಿನಿಧಿಗಳ ಗೌರವ ಮತ್ತು ವೈಯಕ್ತಿಕ ಗಡಿಗಳ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಲವರು ಪ್ರಿಯಾ ಸರೋಜ್ ಅವರ ಧೈರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದಾರೆ.

ಪ್ರಿಯಾ ಸರೋಜ್ 2024ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿ ಮಚ್ಲಿಶಹರ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅವರು ಬಿಜೆಪಿಯ ಹಾಲಿ ಸಂಸದ ಬಿಪಿ ಸರೋಜ್ ಅವರನ್ನು 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ ರಾಜಕೀಯ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು.

Must Read