Wednesday, November 5, 2025

Viral News | ಇಲ್ಲಿದೆ ನೋಡಿ ಪುಟ್ಟ ದೇಶ…ಇಲ್ಲಿ ರಾತ್ರಿ ಮನೆಗಳಿಗೆ ಬೀಗ ಹಾಕಲ್ಲ, ಕಳ್ಳಕಾಕರಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದು ಮನೆ ಅಂದಾಗ ಅಲ್ಲಿ ನಾವು ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡುತ್ತೇವೆ. ಯಾವ ಭಯವೂ ಇಲ್ಲದೆ ಮುಕ್ತವಾಗಿ ಸುರಕ್ಷಿತ ಸ್ಥಳದಲ್ಲಿ ಇರಲು ಬಯಸುತ್ತೇವೆ. ಅದಕ್ಕಾಗಿ ಸುರಕ್ಷಿತ ಪ್ರದೇಶದಲ್ಲಿ ಮನೆ ಕಟ್ಟಿ ಜೀವನ ನಡೆಸುತ್ತೇವೆ.

ಇದೀಗ ನೀವು ಅಂಥ ಕನಸುಗಾರರಾಗಿದ್ದರೆ ನಿಮಗೆ ಸೂಕ್ತವಾಗುವ ದೇಶವೊಂದು ಇದೆ. ಇದು ಯೂರೋಪ್​ನಲ್ಲಿರುವ ಬಹಳ ಪುಟ್ಟದಾದ ಲೀಕ್ಟನ್​ಸ್ಟೀನ್ ದೇಶ.

ಸ್ವಿಟ್ಜರ್​ಲ್ಯಾಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ಲೀಕ್ಟನ್​ಸ್ಟೀನ್ ಒಂದು ಪುಟ್ಟ ದೇಶ. ಇಲ್ಲಿ ಏರ್​ಪೋರ್ಟ್ ಇಲ್ಲ, ಸ್ವಂತ ಕರೆನ್ಸಿ ಇಲ್ಲ. ಆದರೂ ಕೂಡ ಶ್ರೀಮಂತ ನಾಡೆನಿಸಿದೆ. ಇಲ್ಲಿ ಅಪರಾಧವೇ ನಡೆಯದೇನೋ ಅನ್ನುವಷ್ಟು ಮಾತ್ರ ಕ್ರೈಮ್ ರೇಟ್ ಇರುವುದು. ಇಲ್ಲಿಯ ಜನರು ತಮ್ಮ ಮನೆಗಳಿಗೆ ಸಾಮಾನ್ಯವಾಗಿ ಬೀಗ ಹಾಕುವುದೇ ಇಲ್ಲ. ಅಷ್ಟರಮಟ್ಟಿಗೆ ಸುರಕ್ಷಿತವಾಗಿದೆ ಈ ದೇಶ.

ಇನ್ನು ಇಲ್ಲಿ ಇಷ್ಟು ಸುರಕ್ಷತೆ ಇದೆ ಎಂದರೆ ಇಲ್ಲಿ ಬಹಳ ಕಡಿಮೆ ಪೊಲೀಸ್ ಮತ್ತು ಮಿಲಿಟರಿ ಉಪಸ್ಥಿತಿ ಇದೆ.

ಲೀಕ್ಟನ್​ಸ್ಟೀನ್ ದೇಶವು ತನ್ನ ಸುತ್ತಲಿನ ಪರಿಸರ ಮತ್ತು ದೇಶಗಳೊಂದಿಗೆ ಉತ್ತಮ ತಾಳಮೇಳ ಹೊಂದಿದೆ. ಸ್ವಿಟ್ಜರ್​ಲೆಂಡ್ ಮತ್ತು ಆಸ್ಟ್ರಿಯಾ ದೇಶಗಳ ಸಾರಿಗೆ ನೆಟ್ವರ್ಕ್ ಅನ್ನೇ ತನ್ನ ನಾಡಿಗೆ ವಿಸ್ತರಿಸಿಕೊಂಡಿದೆ. ಸ್ವಿಟ್ಜರ್​ಲೆಂಡ್​ನ ಸ್ವಿಸ್ ಫ್ರಾಂಕ್ ಕರೆನ್ಸಿಯನ್ನೇ ಇದು ಬಳಸುತ್ತದೆ. ಇದರೊಂದಿಗೆ ಸ್ವಂತವಾದ ಸೆಂಟ್ರಲ್ ಬ್ಯಾಂಕ್ ಇಟ್ಟುಕೊಳ್ಳುವ ಗೋಜಲು ಇರುವುದಿಲ್ಲ.

ಲೀಕ್ಟನ್​ಸ್ಟೀನ್ ದೇಶದ ಒಟ್ಟು ವಿಸ್ತೀರ್ಣ 160 ಚದರ ಕಿಮೀ ಮಾತ್ರ. ಇಲ್ಲಿಯ ಜನಸಂಖ್ಯೆ ಕೇವಲ 42,000 ಆಸುಪಾಸಿನಷ್ಟೇ ಇರುವುದು. ಬೆಂಗಳೂರಿನ ಒಂದು ಪುಟ್ಟ ಏರಿಯಾದಲ್ಲೇ ಇದಕ್ಕಿಂತ ಹೆಚ್ಚು ಜನರು ಇರುತ್ತಾರೆ.

ಈ ದೇಶ ಸಾಲವೇ ಹೊಂದಿಲ್ಲ. ಇಲ್ಲಿರುವ ಜನರು ಪ್ರಯೋಗಶೀಲತೆ ಮತ್ತು ನಾವೀನ್ಯತೆಯಲ್ಲಿ ಪಳಗಿದವರು. ಎಂಜಿನಿಯರಿಂಗ್​ನಲ್ಲಿ ನಿಷ್ಣಾತರು. ಅಂತೆಯೇ, ಇಲ್ಲಿ ಉತ್ಕೃಷ್ಟವಾದ ಮ್ಯಾನುಫ್ಯಾಕ್ಚರಿಂಗ್ ಸೌಕರ್ಯ ಇದೆ. ಸ್ವಿಟ್ಜರ್​ಲೆಂಡ್ ರೀತಿಯಲ್ಲಿ ಪ್ರಿಸಿಶಿನ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಲೀಕ್ಟನ್​ಸ್ಟೀನ್ ಜನರು ನಿಷ್ಣಾತರಾಗಿದ್ದಾರೆ.

error: Content is protected !!