ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಗಡಿಗೆ ಹೋದಾಗ ವಸ್ತುಗಳು ಇಷ್ಟವಾಗದೇ ಖರೀದಿ ಮಾಡದೆ ಹೊರಡುವುದು ಸಹಜ. ಆದರೆ ಇತ್ತೀಚೆಗೆ ಜೈಪುರದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಹಿಳೆಯೊಬ್ಬರು ನಗರದ ಅಂಗಡಿಗೆ ಭೇಟಿ ನೀಡಿ ಗಂಟೆಗಟ್ಟಲೆ ವಿವಿಧ ವಸ್ತುಗಳನ್ನು ನೋಡಿದರೂ, ಕೊನೆಗೆ ಏನನ್ನೂ ಖರೀದಿಸದೆ ಹೊರಟಾಗ ನಡೆದ ಘಟನೆ ಎಲ್ಲರ ಮನ ಮುಟ್ಟಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳಾ ವ್ಯಾಪಾರಿಯೊಬ್ಬರು ಗ್ರಾಹಕಿಯ ಮುಂದೆ ಕೈಜೋಡಿಸಿ, ಕಾಲಿಗೆ ಬಿದ್ದು ಕನಿಷ್ಠ ಒಂದಾದರೂ ವಸ್ತುವನ್ನು ಖರೀದಿಸುವಂತೆ ಬೇಡಿಕೊಳ್ಳುತ್ತಿರುವುದು ಕಾಣಿಸುತ್ತದೆ. ಅಂಗಡಿಯ ಸಿಬ್ಬಂದಿ ದೀರ್ಘ ಕಾಲ ಸೇವೆ ನೀಡಿದ್ದರೂ ಒಂದು ವಸ್ತು ಕೂಡ ಮಾರಾಟವಾಗದೆ ಹೋಗಿರುವುದು ವ್ಯಾಪಾರಿಯ ನಿರಾಸೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಈ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಜನರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇದು ವ್ಯಾಪಾರಿಗಳ ಸಂಕಷ್ಟವನ್ನು ತೋರಿಸುತ್ತದೆ ಎಂದರೆ, ಇನ್ನೂ ಕೆಲವರು ಇಂತಹ ಒತ್ತಡ ಗ್ರಾಹಕರಿಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿಲ್ಲರೆ ವ್ಯಾಪಾರಿಗಳು ಎದುರಿಸುತ್ತಿರುವ ಆರ್ಥಿಕ ಒತ್ತಡ, ಕಡಿಮೆ ಮಾರಾಟ ಮತ್ತು ಗ್ರಾಹಕರ ವರ್ತನೆ ಕುರಿತ ಚರ್ಚೆಯನ್ನು ಈ ವಿಡಿಯೋ ಮತ್ತೆ ಮುನ್ನೆಲೆಗೆ ತಂದಿದೆ. ಈ ಘಟನೆಯ ಸತ್ಯಾಸತ್ಯತೆ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲದಿದ್ದರೂ, ವೈರಲ್ ವಿಡಿಯೋ ಮಾತ್ರ ಸಾರ್ವಜನಿಕರ ಮನಮುಟ್ಟುವಂತಿದೆ.


