ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನ ಪ್ರಯಾಣದ ವೇಳೆ ನಿದ್ರೆ ಮಾಡೋದೇ, ಊಟ ತಪ್ಪಿಸಿಕೊಳ್ಳೋದೇ ಬಹುತೇಕ ಪ್ರಯಾಣಿಕರಿಗೆ ಸಾಮಾನ್ಯ. ಆದರೆ ಇತ್ತೀಚೆಗೆ ನಡೆದೊಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ವಿಮಾನದಲ್ಲಿ ನಿದ್ರಿಸಿದ್ದ ಪ್ರಯಾಣಿಕನನ್ನು ಊಟಕ್ಕಾಗಿ ಎಬ್ಬಿಸದೇ, ಬದಲಿಗೆ ಸಣ್ಣ ಟಿಪ್ಪಣಿಯೊಂದನ್ನು ಬಿಟ್ಟು ಹೋಗಿದ್ದ ವಿಮಾನ ಸಿಬ್ಬಂದಿಯ ನಡೆ ಇದೀಗ ವೈರಲ್ ಆಗಿದೆ.
X (ಟ್ವಿಟರ್) ಬಳಕೆದಾರ ಕುಶ್ (@DealDigger_) ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಅಕಾಸಾ ಏರ್ ವಿಮಾನದಲ್ಲಿ ಪ್ರಯಾಣಿಸುವಾಗ ಕೆಲಸದ ಒತ್ತಡದಿಂದಾಗಿ ತಾವು ಗಾಢ ನಿದ್ರೆಗೆ ಜಾರಿದ್ದಾಗಿ ಹೇಳಿದ್ದಾರೆ. ಈ ವೇಳೆ ವಿಮಾನ ಸಿಬ್ಬಂದಿ ಊಟ ವಿತರಣೆಗಾಗಿ ಅವರನ್ನು ಎಬ್ಬಿಸಲಿಲ್ಲ. ಆದರೆ ಅವರು ಎಚ್ಚರವಾದಾಗ, ಆಸನದ ಮೇಲೆ ಇಡಲಾಗಿದ್ದ ಚಿಕ್ಕ ಟಿಪ್ಪಣಿ ಕುಶ್ ಮನಸ್ಸು ಗೆದ್ದಿದೆ. “ನಿಮ್ಮ ನಿದ್ರೆಗೆ ತೊಂದರೆ ಕೊಡಬಾರದೆಂದು ಊಟ ನೀಡಲಿಲ್ಲ. ನೀವು ಎದ್ದ ನಂತರ ಸೇವಾ ಬಟನ್ ಒತ್ತಿರಿ” ಎಂದು ಅದರಲ್ಲಿ ಬರೆಯಲಾಗಿತ್ತು.
ಈ ಸಣ್ಣ ಮಾನವೀಯ ನಡೆಗೆ ಕುಶ್ ಸಾರ್ವಜನಿಕವಾಗಿ ಅಕಾಸಾ ಏರ್‌ಗೆ ಧನ್ಯವಾದ ಹೇಳಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಕಾಸಾ ಏರ್ ಕೂಡ, ಪ್ರಯಾಣಿಕರ ಆರಾಮ ಮತ್ತು ನೆನಪಿನಲ್ಲಿ ಉಳಿಯುವ ಸೇವೆ ನೀಡುವುದು ತಮ್ಮ ಗುರಿ ಎಂದು ತಿಳಿಸಿದೆ. ಸಿಬ್ಬಂದಿಯ ಮಾನವೀಯ ನಡೆ ಅನೇಕ ಬಳಕೆದಾರರ ಹೃದಯ ಗೆದ್ದಿದೆ.


