ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈನಿಕನೊಬ್ಬನ ಬದುಕು ಮುಗಿದ ಕ್ಷಣದಲ್ಲೇ ಹೊಸ ಜೀವೊಂದು ಜಗತ್ತಿಗೆ ಬಂದಿರುವ ಹೃದಯ ವಿದ್ರಾವಕ ಘಟನೆ ಸತಾರಾ ಜಿಲ್ಲೆಯ ಸಿತಾರಾ ತಾಲೂಕಿನಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತೀಯ ಸೇನಾ ಸೈನಿಕನ ಅಂತ್ಯಕ್ರಿಯೆ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಯುವಾಗಲೇ, ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಊರನ್ನೇ ಶೋಕದಲ್ಲಿ ಮುಳುಗಿಸಿದೆ.
ಮೃತ ಸೈನಿಕನನ್ನು ಡೇರ್ ಗ್ರಾಮದ ನಿವಾಸಿ ಪ್ರಮೋದ್ ಪರಶುರಾಮ್ ಜಾಧವ್ ಎಂದು ಗುರುತಿಸಲಾಗಿದೆ. ಸಿಕಂದರಾಬಾದ್–ಶ್ರೀನಗರ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಪತ್ನಿಯ ಹೆರಿಗೆಯ ಹಿನ್ನೆಲೆಯಲ್ಲಿ ಎಂಟು ದಿನಗಳ ಹಿಂದೆ ರಜೆ ಪಡೆದು ಊರಿಗೆ ಬಂದಿದ್ದರು. ತಾಯಿಯನ್ನು ಈಗಾಗಲೇ ಕಳೆದುಕೊಂಡಿದ್ದ ಜಾಧವ್, ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು.
ವೈಯಕ್ತಿಕ ಕೆಲಸಕ್ಕಾಗಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈಚರ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಊರಿಗೆ ತರಲಾದ ದಿನವೇ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅಂತ್ಯಕ್ರಿಯೆಯ ವೇಳೆ ಪತ್ನಿ ಹಾಗೂ ಕೇವಲ ಒಂದು ಗಂಟೆಯ ಅಂತರದಲ್ಲಿ ಹುಟ್ಟಿದ ಮಗಳನ್ನು ಅಂತಿಮ ದರ್ಶನಕ್ಕೆ ಕರೆತರಲಾಗಿದ್ದು, ಆ ದೃಶ್ಯ ಎಲ್ಲರ ಕಣ್ಣಂಚು ಒದ್ದೆ ಮಾಡಿತ್ತು. ಜಾಧವ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಮನಕಲಕುವ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

