ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರೋಚಕ ಎರಡನೇ ಏಕದಿನ ಪಂದ್ಯವು ನಾಳೆ (ಅ.23) ಅಡಿಲೇಡ್‌ನ ಐತಿಹಾಸಿಕ ‘ದಿ ಓವಲ್’ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ವೈಯಕ್ತಿಕವಾಗಿ ಎರಡು ಮಹತ್ವದ ಇತಿಹಾಸ ನಿರ್ಮಿಸುವ ಅವಕಾಶವನ್ನು ಒದಗಿಸಿದೆ.
ಅಡಿಲೇಡ್ ಓವಲ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 5 ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು, ಆಸ್ಟ್ರೇಲಿಯಾದ ಒಂದೇ ಮೈದಾನದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ವಿದೇಶಿ ಆಟಗಾರ ಎಂಬ ದಾಖಲೆಯನ್ನು ಸದ್ಯ ಇಂಗ್ಲೆಂಡ್‌ನ ದಿಗ್ಗಜ ಜ್ಯಾಕ್ ಹಾಬ್ಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಹಾಬ್ಸ್ ಅವರು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ 5 ಟೆಸ್ಟ್ ಶತಕಗಳನ್ನು ಗಳಿಸಿದ್ದರು.
ನಾಳಿನ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್‌ನಿಂದ ಮೂರಂಕಿ ಮೊತ್ತ ಮೂಡಿಬಂದರೆ, ಅವರು ಜ್ಯಾಕ್ ಹಾಬ್ಸ್ ದಾಖಲೆಯನ್ನು ಮುರಿದು, ಆಸ್ಟ್ರೇಲಿಯಾದ ಒಂದೇ ಮೈದಾನದಲ್ಲಿ ಅತಿ ಹೆಚ್ಚು (6) ಶತಕಗಳನ್ನು ಬಾರಿಸಿದ ಮೊದಲ ವಿದೇಶಿ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ.
1000 ರನ್‌ಗಳ ಅಪರೂಪದ ದಾಖಲೆಗೂ ಕೇವಲ 25 ರನ್ ಬಾಕಿ!
ಶತಕದ ಜೊತೆಗೆ, ಆಸ್ಟ್ರೇಲಿಯಾದ ಒಂದೇ ಮೈದಾನದಲ್ಲಿ 1000 ರನ್‌ಗಳ ಗಡಿಯನ್ನು ತಲುಪಿದ ಮೊದಲ ವಿದೇಶಿ ಬ್ಯಾಟರ್ ಎನಿಸಿಕೊಳ್ಳಲು ವಿರಾಟ್ ಕೊಹ್ಲಿಗೆ ಕೇವಲ 25 ರನ್‌ಗಳ ಅವಶ್ಯಕತೆಯಿದೆ.
ಅಡಿಲೇಡ್ ಓವಲ್‌ನಲ್ಲಿ ಇದುವರೆಗೆ 17 ಇನ್ನಿಂಗ್ಸ್‌ಗಳನ್ನು ಆಡಿರುವ ಕಿಂಗ್ ಕೊಹ್ಲಿ, 975 ರನ್‌ಗಳನ್ನು ಗಳಿಸಿದ್ದಾರೆ. ನಾಳಿನ ಪಂದ್ಯದಲ್ಲಿ ಕೇವಲ 25 ರನ್ ಗಳಿಸಿದರೆ, ಅವರು ಕಾಂಗರೂ ನಾಡಿನ ಒಂದೇ ಮೈದಾನದಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದ ಮೊದಲ ಅಂತರರಾಷ್ಟ್ರೀಯ ಆಟಗಾರನಾಗಲಿದ್ದಾರೆ.
ಹೀಗಾಗಿ, ನಾಳೆಯ ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯವು ಕೇವಲ ತಂಡಗಳ ಹಣಾಹಣಿಯಷ್ಟೇ ಅಲ್ಲದೆ, ವಿರಾಟ್ ಕೊಹ್ಲಿಯ ದಾಖಲೆಗಳ ಕೌಂಟ್‌ಡೌನ್‌ಗೆ ಸಾಕ್ಷಿಯಾಗಲಿದೆ. ಅಭಿಮಾನಿಗಳು ಕೊಹ್ಲಿಯ ಬ್ಯಾಟ್‌ನಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದಾರೆ.