Friday, January 9, 2026

ರಂಜಿತಾ ಪುತ್ರನ ಶಿಕ್ಷಣಕ್ಕೆ ವಿಶ್ವದರ್ಶನ ಸಂಸ್ಥೆ ಆಸರೆ; ಆಟೋ ಚಾಲಕನಿಗೆ ಸನ್ಮಾನ

ಹೊಸದಿಗಂತ ಯಲ್ಲಾಪುರ:

ಇತ್ತೀಚೆಗೆ ಹಂತಕನ ದಾಳಿಗೆ ಬಲಿಯಾದ ದಲಿತ ಯುವತಿ ರಂಜಿತಾ ಅವರ ಅನಾಥ ಪುತ್ರನಿಗೆ ಭರವಸೆಯಂತೆ ಉಚಿತ ಶಿಕ್ಷಣದ ಪ್ರಮಾಣಪತ್ರವನ್ನು ವಿತರಿಸುವ ಮೂಲಕ ಹಿಂದೂ ಸಂಘಟನೆಗಳು ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಮಾನವೀಯತೆ ಮೆರೆದಿವೆ.

ರಂಜಿತಾ ಹತ್ಯೆ ಖಂಡಿಸಿ ನಡೆದಿದ್ದ ಬಂದ್ ಮತ್ತು ಪ್ರತಿಭಟನಾ ಸಭೆಯ ಸಂದರ್ಭದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ಅವರು ಬಾಲಕನ ಸಂಪೂರ್ಣ ಶಿಕ್ಷಣದ ಹೊಣೆ ಹೊರುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರೊಂದಿಗೆ ಮೃತಳ ಮನೆಗೆ ಭೇಟಿ ನೀಡಿದ ಅವರು, ಬಾಲಕ ಸ್ವಾತಿಕ್ ಸಚಿನ ಕಾಟೆಗೆ ಉಚಿತ ಶಿಕ್ಷಣದ ಲಿಖಿತ ವಾಗ್ದಾನ ಪತ್ರವನ್ನು ಹಸ್ತಾಂತರಿಸಿದರು.

ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮನೆಗೆ ಭೇಟಿ ನೀಡಿ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರಲ್ಲದೆ, ಶಿಕ್ಷಣ ಸಂಸ್ಥೆಯ ಈ ಉದಾತ್ತ ನಿರ್ಧಾರವನ್ನು ಶ್ಲಾಘಿಸಿದ್ದರು.

ಯುವತಿಯ ಮೇಲೆ ದಾಳಿಯಾದಾಗ ಆಂಬ್ಯುಲೆನ್ಸ್ ಅಲಭ್ಯವಿದ್ದ ಸಂದರ್ಭದಲ್ಲಿ, ಸಮಯಪ್ರಜ್ಞೆ ಮೆರೆದು ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಆಟೋ ಚಾಲಕ ಚಂದ್ರಶೇಖರ ಭೋವಿವಡ್ಡರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಪ್ರಸಾದ ಹೆಗಡೆ, ವಿಹಿಂಪ ಅಧ್ಯಕ್ಷ ಗಜಾನನ ನಾಯ್ಕ, ಪ್ರಮುಖರಾದ ವೆಂಕಟ್ರಮಣ ಬೆಳ್ಳಿ, ಶ್ಯಾಮಿಲಿ ಪಾಟಣಕರ, ಶ್ರುತಿ ಹೆಗಡೆ, ಮಂಜುನಾಥ ಹೀರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!