ಹೊಸದಿಗಂತ ಡಿಜಿಟಲ್ ಡೆಸ್ಕ್;
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗದ ಅಕ್ರಮ ಬಯಲಿಗೆ ಎಳೆಯಲು ನಮ್ಮ ಬಳಿ ಬಾಂಬ್ ಇದೆ ಎಂದು ಹೇಳಿದ್ದ ಹೇಳಿಕೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ಕೊಟ್ಟಿದ್ದಾರೆ. ಬಾಂಬ್ ಇದ್ದರೆ ಈ ಕೂಡಲೇ ಸಿಡಿಸಲಿ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಮತ ಕಳ್ಳತನದಲ್ಲಿ ಚುನಾವಣಾ ಆಯೋಗ ಸಹಾಯ ಮಾಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಆರೋಪವನ್ನು ಸಾಬೀತುಪಡಿಸಲು ತಮ್ಮ ಬಳಿ ‘ಆಟಂ ಬಾಂಬ್’ ಇದೆ ಎಂದು ಪಾಟ್ನಾದಲ್ಲಿ ಅವರು ಮಾತನಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್, ರಾಹುಲ್ ಗಾಂಧಿ ತಮ್ಮ ಬಳಿ ‘ಆಟಂ ಬಾಂಬ್’ ಇದೆ ಎಂದು ಹೇಳುತ್ತಾರೆ. ಒಂದೊಮ್ಮೆ ಅವರ ಬಳಿ ಆಟಂ ಬಾಂಬ್ ಇದ್ದರೆ ಒಮ್ಮೆಲೆ ಅದನ್ನು ಸ್ಫೋಟಿಸಬೇಕು. ಅದು ಅವರಿಗೆ ಹಾನಿಯಾಗದಂತೆ ಅವರು ಎಚ್ಚರ ವಹಿಸುವುದು ಸೂಕ್ತʼ ಎಂದು ಟೀಕೆ ಮಾಡಿದ್ದಾರೆ.
ಭಾರತದ ಚುನಾವಣಾ ಆಯೋಗವು ವಿಶ್ವಾಸಾರ್ಹ ಸಂಸ್ಥೆ. ಮತಕಳ್ಳತನ ಮಾಡುವ ಯಾವುದೇ ಪ್ರಯತ್ನವೂ ಮಾಡಿಲ್ಲ. ಬಿಹಾರ ವಿಧಾನಸಭೆ ಚುನಾವಣೆ ನ್ಯಾಯಯುತವಾಗಿ ನಡೆಯಲು ಅದು, ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿದೆ. ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಕ್ಷುಲ್ಲಕ ಹೇಳಿಕೆ ನೀಡುವುದು, ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಗುಡುಗಿದರು.
ಕಾಂಗ್ರೆಸ್ ಪಕ್ಷವು 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಪ್ರಯತ್ನಿಸಿತು. ಆ ಪಕ್ಷದ ಕೈಗಳಲ್ಲಿ ರಕ್ತವಿದೆ ಎಂದು ರಾಜನಾಥ್ ಸಿಂಗ್ ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಟೀಕಿಸಿದರು.