Wednesday, December 10, 2025

ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿಯಿಂದಲೇ ಮತ ಚೋರಿ: ಲೋಕಸಭೆಯಲ್ಲಿ ಗುಡುಗಿದ ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್;

ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣದ ಸಮಯದಲ್ಲಿ ಅವರ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ತೀವ್ರ ವಾಗ್ವಾದ ನಡೆಯಿತು.

ರಾಹುಲ್ ಗಾಂಧಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ವಿರುದ್ಧ ಮತ ಕಳ್ಳತನದ ಆರೋಪ ಮಾಡಿದ್ದರು. ಈ ಕುರಿತು ಚರ್ಚೆಗೆ ಅವಕಾಶ ಕೋರಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣಕ್ಕೆ ಅಡ್ಡಿಪಡಿಸಿದರು.

ಲೋಕಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ವಿರೋಧ ಪಕ್ಷಗಳು ಚಿಂತಿತವಾಗಿವೆ. ಏಕೆಂದರೆ ಅದರಿಂದ ಅವರಿಗೆ ಮತ ಹಾಕುವ ಅಕ್ರಮ ವಲಸಿಗರ ಹೆಸರುಗಳು ಡಿಲೀಟ್ ಆಗುತ್ತವೆ ಎಂಬ ಆತಂಕ ಅವರನ್ನು ಕಾಡುತ್ತಿದೆ ಎಂದು ಹೇಳಿದರು. ಆಗ ಅವರ ಭಾಷಣಕ್ಕೆ ಅಡ್ಡಿಪಡಿಸಿದ ರಾಹುಲ್ ಗಾಂಧಿ “ಮತ ಚೋರಿ” ಕುರಿತು ಚರ್ಚೆಗೆ ಬರುವಂತೆ ಸವಾಲು ಹಾಕಿದರು.

ಮತಗಳ್ಳತನದ ಬಗ್ಗೆ ನನ್ನ ಪತ್ರಿಕಾಗೋಷ್ಠಿಗೆ ಸೂಕ್ತ ಸ್ಪಷ್ಟನೆ ನೀಡಬೇಕು, ಈ ಬಗ್ಗೆ ಚರ್ಚೆ ನಡೆಸಬೇಕೆಂದು ರಾಹುಲ್ ಗಾಂಧಿ ಅಮಿತ್ ಶಾ ಅವರಿಗೆ ಸವಾಲು ಹಾಕಿದರು.

ಇದರಿಂದ ಕೋಪಗೊಂಡ ಅಮಿತ್ ಶಾ, “ನಾನು ಯಾವ ವಿಷಯ ಮಾತನಾಡಬೇಕೆಂಬುದನ್ನು ನಾನೇ ನಿರ್ಧಾರ ಮಾಡುತ್ತೇನೆ. ಯಾರೂ ನನಗೆ ನಿರ್ದೇಶನ ನೀಡುವ ಅಗತ್ಯವಿಲ್ಲ” ಎಂದು ಹೇಳಿದರು.

ನೀವು ಗೆದ್ದಾಗ ಮತದಾರರ ಪಟ್ಟಿಗಳು ಸಂಪೂರ್ಣವಾಗಿ ಚೆನ್ನಾಗಿರುತ್ತವೆ, ಆಗ ನೀವು ಹೊಸ ಬಟ್ಟೆಗಳನ್ನು ಧರಿಸಿ ಪ್ರಮಾಣವಚನ ಸ್ವೀಕರಿಸುತ್ತೀರಿ. ಆದರೆ ಬಿಹಾರದಲ್ಲಾದಂತೆ ನೀವು ಚುನಾವಣೆಯಲ್ಲಿ ಸೋತಾಗ ಮತದಾರರ ಪಟ್ಟಿಯಲ್ಲಿ ಸಮಸ್ಯೆ ಇದೆ ಎಂದು ನೀವು ಹೇಳುತ್ತೀರಿ. ಈ ಇಬ್ಬಂದಿತನದ ಮಾನದಂಡಗಳು ಎಷ್ಟರ ಮಟ್ಟಿಗೆ ಸರಿ? ಎಂದು ಅಮಿತ್ ಶಾ ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದರು.

“ಹೈಡ್ರೋಜನ್ ಬಾಂಬ್” ಎಂದು ಹೇಳಿಕೊಂಡು ಮಾಡಿದ ಮತದಾರರ ಪಟ್ಟಿಗಳ ಕುರಿತ ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಗಳನ್ನು ಟೀಕಿಸಿದ ಅಮಿತ್ ಶಾ, “ವಿರೋಧ ಪಕ್ಷದ ನಾಯಕ ಮತ ಚೋರಿ (ಮತ ಕಳ್ಳತನ) ಬಗ್ಗೆ ಮಾತನಾಡಿದ್ದಾರೆ. ಆದರೆ, ಬಹಳ ಹಿಂದಿನ ತಲೆಮಾರುಗಳಿಂದಲೂ ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮತಗಳನ್ನು ದೋಚುತ್ತಲೇ ಬಂದಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.

ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದ ನೆಹರು ಅವರನ್ನು ಆಯ್ಕೆ ಮಾಡಿದಾಗಲೇ ‘ವೋಟ್ ಚೋರಿ’ ಮೊದಲ ಬಾರಿಗೆ ಆರಂಭವಾಯಿತು. ಆ ಸಮಯದಲ್ಲಿ ಪ್ರಾಂತ್ಯಗಳ ಕಾಂಗ್ರೆಸ್ ಘಟಕಗಳ ಮುಖ್ಯಸ್ಥರು ತಲಾ ಒಂದು ಮತವನ್ನು ಪಡೆಯಬೇಕಾಗಿತ್ತು. ಅದು ಅವರಿಗೆ ಇದ್ದ ಟಾರ್ಗೆಟ್ ಆಗಿತ್ತು. ಆದ್ದರಿಂದಲೇ, 28 ಮತಗಳು ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರಿಗೆ ಹೋಯಿತು ಮತ್ತು 2 ಮತಗಳು ಜವಾಹರಲಾಲ್ ನೆಹರು ಪರವಾಗಿ ಚಲಾವಣೆಯಾದವು. ಆದರೂ ನೆಹರು ಅವರೇ ಪ್ರಧಾನಿಯಾದರು ಎಂದು ಅಮಿತ್ ಶಾ ಆರೋಪಿಸಿದರು. ಈ ಹೇಳಿಕೆ ಸದನದ ವಿರೋಧ ಪಕ್ಷಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

‘ವೋಟ್ ಚೋರಿ’ಯ ಮತ್ತೊಂದು ಘಟನೆ ಇಂದಿರಾ ಗಾಂಧಿ ರಾಯ್‌ಬರೇಲಿಯಿಂದ ಗೆದ್ದಾಗ ಮತ್ತು ಚುನಾವಣೆಯನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ನಡೆಯಿತು. ನ್ಯಾಯಾಲಯವು ಆ ಚುನಾವಣೆಯನ್ನು ರದ್ದುಗೊಳಿಸಿತು. ಆ ಮತ ಚೋರಿಯನ್ನು ಮರೆಮಾಡಲು, ಅವರು ಪ್ರಧಾನ ಮಂತ್ರಿಯ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಬಾರದು ಎಂಬ ಕಾನೂನನ್ನು ತಂದರು. ವಿರೋಧ ಪಕ್ಷದ ನಾಯಕರು ಚುನಾವಣಾ ಆಯುಕ್ತರಿಗೆ ವಿನಾಯಿತಿ ನೀಡುವ ಬಗ್ಗೆ ಮಾತನಾಡುತ್ತಾರೆ. ಆದರೆ, ಇದರ ಬಗ್ಗೆ ಅವರು ಏನು ಹೇಳುತ್ತಾರೆ?” ಎಂದು ಅಮಿತ್ ಶಾ ಪ್ರಶ್ನಿಸಿದರು.

ಇಂದಿರಾ ಗಾಂಧಿಯವರು ಹಿರಿತನದ ವಿಷಯದಲ್ಲಿ ನ್ಯಾಯಾಧೀಶರನ್ನು ಬೈಪಾಸ್ ಮಾಡಿದರು. ಮುಖ್ಯ ನ್ಯಾಯಮೂರ್ತಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದವರನ್ನು ಆಯ್ಕೆ ಮಾಡಿದರು. ನಂತರ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಿರುದ್ಧದ ಪ್ರಕರಣವನ್ನು ಗೆದ್ದರು. ಇದು ಇತಿಹಾಸ” ಎಂದು ಅಮಿತ್ ಶಾ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರ ಬೆವರಿಳಿಸಿದರು.

ಸೋನಿಯಾ ಗಾಂಧಿ ಭಾರತ ದೇಶದ ಪ್ರಜೆಯಾಗುವ ಮೊದಲೇ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಇದು ಮತಗಳ್ಳತನವಲ್ಲವೇ?” ಎಂದು ಪ್ರಶ್ನಿಸಿದರು. ಕಾಂಗ್ರೆಸ್​ ನಾಯಕರು 3 ಬಾರಿ ಮತ ಚೋರಿ ಮಾಡಿದ್ದಾರೆ ಎಂದು ಅಮಿತ್ ಶಾ ಟೀಕಿಸಿದರು.

error: Content is protected !!