ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ರೋಚಕ ಹಣಾಹಣಿಗೆ ತೆರೆ ಬಿದ್ದಿದ್ದು, ಕನ್ನಡಿಗರ ನೆಚ್ಚಿನ ‘ಗಿಲ್ಲಿ’ ನಟ ಅದ್ಭುತ ಜಯ ದಾಖಲಿಸಿದ್ದಾರೆ. ಕಿಚ್ಚ ಸುದೀಪ್ ಅವರು ಗಿಲ್ಲಿಯ ಕೈ ಎತ್ತಿ ವಿಜೇತರೆಂದು ಘೋಷಿಸುವ ಮೂಲಕ ಲಕ್ಷಾಂತರ ಅಭಿಮಾನಿಗಳ ಕನಸನ್ನು ನನಸು ಮಾಡಿದ್ದಾರೆ. ಈ ಸೀಸನ್‌ನಲ್ಲಿ ಗಿಲ್ಲಿ ಬರೋಬ್ಬರಿ 40 ಕೋಟಿಗೂ ಅಧಿಕ ಮತಗಳನ್ನು ಪಡೆಯುವ ಮೂಲಕ ಕನ್ನಡ ರಿಯಾಲಿಟಿ ಶೋ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ.

ಈ ಹಿಂದೆ ಪಾಲ್ಗೊಂಡಿದ್ದ ಹಲವು ರಿಯಾಲಿಟಿ ಶೋಗಳಲ್ಲಿ ‘ರನ್ನರ್ ಅಪ್’ ಸ್ಥಾನಕ್ಕೆ ತೃಪ್ತಿಪಡುತ್ತಿದ್ದ ಗಿಲ್ಲಿಗೆ ಈ ಬಾರಿ ಬಿಗ್ ಬಾಸ್ ವೇದಿಕೆ ನ್ಯಾಯ ಒದಗಿಸಿದೆ. ತಮಗೆ ಕಾಡುತ್ತಿದ್ದ ‘ರನ್ನರ್ ಅಪ್’ ಹಣೆಪಟ್ಟಿಯನ್ನು ಕಳಚಿದ ಗಿಲ್ಲಿ, ಇಂದು ವಿಜೇತರಾಗಿ ಹೊರಹೊಮ್ಮಿದ್ದಾರೆ. ಇನ್ನು ನಟಿ ರಕ್ಷಿತಾ ಅವರು ದ್ವಿತೀಯ ಸ್ಥಾನ (ರನ್ನರ್ ಅಪ್) ಪಡೆದುಕೊಂಡಿದ್ದಾರೆ.
ಕಳೆದ ಸೀಸನ್‌ನ ವಿನ್ನರ್ ಹನುಮಂತ ಅವರು 5 ಕೋಟಿ ಮತಗಳನ್ನು ಪಡೆದಿದ್ದರೆ, ಈ ಬಾರಿ ಗಿಲ್ಲಿ ಅದಕ್ಕಿಂತ ಹತ್ತು ಪಟ್ಟು ಅಂದರೆ 40 ಕೋಟಿ ಮತಗಳನ್ನು ಪಡೆಯುವ ಮೂಲಕ ತಮ್ಮ ಜನಪ್ರಿಯತೆಯನ್ನು ಸಾಬೀತುಪಡಿಸಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಅಶ್ವಿನಿ ಅವರೊಂದಿಗಿನ ಜಿದ್ದಾಜಿದ್ದಿ ಮತ್ತು ಅದಕ್ಕೆ ಅವರು ನೀಡುತ್ತಿದ್ದ ಚತುರ ಪ್ರತ್ಯುತ್ತರಗಳು ಗಿಲ್ಲಿಯ ಮೈಲೇಜ್ ಹೆಚ್ಚಿಸಿದವು. ಅವರ ಹಾಸ್ಯ ಪ್ರಜ್ಞೆ ಮತ್ತು ಮನರಂಜನೆಗೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಮಾರುಹೋಗಿದ್ದರು.
ಜಯಶಾಲಿಯಾದ ಗಿಲ್ಲಿ ನಟನಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಭರ್ಜರಿ ಮಾರುತಿ ಸುಜುಕಿ ವಿಕ್ಟರಿಸ್ ಕಾರ್ ಲಭಿಸಿದೆ. ಈ ಗೆಲುವಿನಿಂದ ಗಿಲ್ಲಿಯ ಬದುಕು ಮತ್ತಷ್ಟು ಉಜ್ವಲವಾಗಲಿದೆ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸುತ್ತಿದ್ದಾರೆ.


