ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ಪರಿಣಾಮ ಬಹುನಿರೀಕ್ಷಿತ ಐಪಿಎಲ್ 2026 ಆವೃತ್ತಿಯ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಐಪಿಎಲ್‌ಗೆ ಭಾಗವಹಿಸಲು ಭಾರತಕ್ಕೆ ಬರಬೇಕಿರುವ ವಿದೇಶಿ ಕ್ರಿಕೆಟಿಗರ ಪ್ರಯಾಣಕ್ಕೂ ಅಡ್ಡಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:
ಯುದ್ಧ ಪರಿಸ್ಥಿತಿಯ ಕಾರಣದಿಂದ ದುಬೈ ಮತ್ತು ದೋಹಾ ಸೇರಿದಂತೆ ಪ್ರಮುಖ ಗಲ್ಫ್ ಸಾರಿಗೆ ಕೇಂದ್ರಗಳ ಮೂಲಕ ಸಂಚರಿಸುವ ಹಲವು ವಿಮಾನಗಳು ರದ್ದಾಗುತ್ತಿವೆ. ಇತ್ತೀಚೆಗೆ ಟಿ20 ವಿಶ್ವಕಪ್ ಬಳಿಕ ಮನೆಗೆ ಮರಳಲು ಹೊರಟಿದ್ದ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರು ದುಬೈ ವಾಯುಪ್ರದೇಶ ಮುಚ್ಚಿದ ಪರಿಣಾಮ ತೊಂದರೆ ಅನುಭವಿಸಿದ್ದರು. ಇದೇ ಪರಿಸ್ಥಿತಿ ಮುಂದುವರಿದರೆ ಐಪಿಎಲ್‌ಗೆ ಅವರ ಆಗಮನವೂ ವಿಳಂಬವಾಗಬಹುದು.
ಅಗತ್ಯವಾದರೆ ಆಟಗಾರರನ್ನು ಭಾರತಕ್ಕೆ ತರಲು ವಿಶೇಷ ಚಾರ್ಟರ್ಡ್ ವಿಮಾನಗಳ ವ್ಯವಸ್ಥೆ ಮಾಡುವ ಸಾಧ್ಯತೆ ಕೂಡ ಇದೆ ಎಂದು ವರದಿಗಳು ತಿಳಿಸಿವೆ. ಯುದ್ಧ ಮುಂದುವರಿದರೆ ಆಟಗಾರರ ಲಭ್ಯತೆ, ಪ್ರಯಾಣ ಹಾಗೂ ಇಂಧನ ಸಮಸ್ಯೆಗಳು ಐಪಿಎಲ್ ಆಯೋಜನೆಗೆ ಸವಾಲಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.



