ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡದಿಂದಾಗಿ ಮಾರ್ಚ್ 1-7ರ ನಡುವೆ 52,000ಕ್ಕೂ ಹೆಚ್ಚು ಭಾರತೀಯರು ಮರಳಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ಗಲ್ಫ್ ಪ್ರದೇಶದಲ್ಲಿನ ಭಾರತೀಯ ಪ್ರಜೆಗಳಿಗೆ ಸ್ಥಳೀಯ ಪ್ರಾಧಿಕಾರದ ಮಾರ್ಗಸೂಚಿಗಳನ್ನು ಹಾಗೂ ಭಾರತೀಯ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳು ನೀಡುವ ಸಲಹೆಗಳನ್ನು ಅನುಸರಿಸಲು ಸೂಚಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯಿಂದ ಉಂಟಾಗುವ ಕಳವಳಗಳನ್ನು ಪರಿಹರಿಸಲು ಪ್ರತಿಯೊಂದು ರಾಯಭಾರ ಕಚೇರಿಯು 24×7 ಸಹಾಯವಾಣಿಗಳನ್ನು ಸ್ಥಾಪಿಸಿದೆ ಎಂದು ತಿಳಿಸಿದೆ.
ವಾಯುಪ್ರದೇಶವನ್ನು ಭಾಗಶಃ ಪುನಃ ತೆರೆದ ನಂತರ, ಭಾರತೀಯ ಮತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ನಿಗದಿತವಲ್ಲದ ಕಾರ್ಯಾಚರಣೆಗಳನ್ನು ಒಳಗೊಂಡಂತೆ ವಾಣಿಜ್ಯ ವಿಮಾನಗಳನ್ನು ಪುನರಾರಂಭಿಸಿವೆ. ಭಾರತೀಯ ಪ್ರಯಾಣಿಕರು ಸುರಕ್ಷಿತವಾಗಿ ಮರಳಲು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಮಾನಗಳನ್ನು ಹಾರಾಟ ನಡೆಸಲು ಯೋಜನೆ ರೂಪಿಸಲಾಗಿದೆ.
ವಾಣಿಜ್ಯ ವಿಮಾನಗಳು ಲಭ್ಯವಿಲ್ಲದ ದೇಶಗಳಲ್ಲಿ ಭಾರತೀಯ ಪ್ರಜೆಗಳು ಆಯ್ಕೆಗಳ ಕುರಿತು ಮಾರ್ಗದರ್ಶನಕ್ಕಾಗಿ ಆಯಾ ರಾಯಭಾರ ಕಚೇರಿ ಅಥವಾ ದೂತಾವಾಸವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ವಿದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಕಲ್ಯಾಣವು ಪ್ರಮುಖ ಆದ್ಯತೆಯಾಗಿ ಉಳಿದಿದೆ ಎಂದು MEA ಒತ್ತಿಹೇಳಿದೆ.



