April 12, 2026
Sunday, April 12, 2026
spot_img

ಮಧ್ಯಪ್ರಾಚ್ಯದಲ್ಲಿ ಮತ್ತೆ ಹೆಚ್ಚಾದ ಯುದ್ಧದ ಕಿಚ್ಚು: ಇಸ್ರೇಲ್ ಭೀಕರ ದಾಳಿಗೆ 11 ಮಂದಿ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನಡೆದ ಮಹತ್ವದ ರಾಜತಾಂತ್ರಿಕ ಪ್ರಯತ್ನಗಳು ವಿಫಲವಾಗಿದ್ದು, ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಸಂಘರ್ಷ ತಾರಕಕ್ಕೇರಿದೆ. ಅಮೆರಿಕ ಮತ್ತು ಇರಾನ್ ನಡುವೆ ನಡೆದ ಸಂಧಾನ ಸಭೆ ಮುರಿದುಬಿದ್ದ ಕೆಲವೇ ಗಂಟೆಗಳಲ್ಲಿ, ಇಸ್ರೇಲ್ ನಡೆಸಿದ ಭೀಕರ ದಾಳಿಗೆ 11 ಮಂದಿ ಬಲಿಯಾಗಿದ್ದಾರೆ.

ದಕ್ಷಿಣ ಲೆಬನಾನ್‌ನ ಟೈರ್ ಪ್ರಾಂತ್ಯದ ಸಮೀಪವಿರುವ ಮಾರೂಬ್ ಮೇಲೆ ಇಸ್ರೇಲಿ ವಾಯುಪಡೆ ನಡೆಸಿದ ದಾಳಿಯಲ್ಲಿ ಭಾರಿ ಸಾವು-ನೋವು ಸಂಭವಿಸಿದೆ.

ದಕ್ಷಿಣ ಪಟ್ಟಣವಾದ ಬಿಂಟ್ ಜೆಬೈಲ್‌ನಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಹೆಜ್ಬೊಲ್ಲಾ ಉಗ್ರರ ನಡುವೆ ಮುಖಾಮುಖಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಸ್ರೇಲಿ ಪಡೆಗಳು ಈ ಪಟ್ಟಣವನ್ನು ಸಂಪೂರ್ಣವಾಗಿ ಸುತ್ತುವರೆದಿದ್ದು, ಹೆಜ್ಬೊಲ್ಲಾ ಮೂಲಸೌಕರ್ಯಗಳನ್ನು ನಾಶಪಡಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ.

ಬಿಂಟ್ ಜೆಬೈಲ್‌ನ ಪ್ರಮುಖ ನೆರೆಹೊರೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇಸ್ರೇಲಿ ಸೈನ್ಯ ಹರಸಾಹಸ ಪಡುತ್ತಿದ್ದು, ಸದ್ಯ ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಗಲ್ಫ್ ವಲಯದಲ್ಲಿ ಯುದ್ಧಕ್ಕೆ ಪೂರ್ಣವಿರಾಮ ಹಾಕಲು ಶನಿವಾರ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳು ಮುಖಾಮುಖಿಯಾಗಿದ್ದರು. ಪಾಕಿಸ್ತಾನ ಈ ಸಂಧಾನದ ಮಧ್ಯಸ್ಥಿಕೆ ವಹಿಸಿತ್ತು. ಆದರೆ ಉಭಯ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಈ ಮಾತುಕತೆ ಯಾವುದೇ ಫಲಿತಾಂಶ ನೀಡದೆ ಅಂತ್ಯಗೊಂಡಿದೆ. ಸಂಧಾನ ವಿಫಲವಾದ ತಕ್ಷಣವೇ ಇಸ್ರೇಲ್ ತನ್ನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !