ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ದೇಶದ ಅನೇಕ ರಾಜ್ಯಗಳಲ್ಲಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ (IMD) ಪ್ರಕಾರ, ಮುಂದಿನ ನಾಲ್ಕು ದಿನಗಳ ಕಾಲ ದಕ್ಷಿಣ ಭಾರತದಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ.
ಆಗ್ನೇಯ ಬಂಗಾಳಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ, ತಮಿಳುನಾಡು ಸೇರಿದಂತೆ ಪಕ್ಕದ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (RMC) ತಿಳಿಸಿದೆ.
ಕರ್ನಾಟಕದಲ್ಲೂ ಮುಂದಿನ ನಾಲ್ಕು ದಿನಗಳು ಮಳೆಯ ಅಬ್ಬರ ಮುಂದುವರಿಯಲಿದೆ. ಹವಾಮಾನ ಇಲಾಖೆ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow Alert) ಘೋಷಿಸಿದ್ದು, ಬೆಂಗಳೂರು, ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತದ ಪರಿಣಾಮದಿಂದ ಸಮುದ್ರ ತೀರಗಳಲ್ಲಿ ಅಲೆಗಳ ಆರ್ಭಟ ಹೆಚ್ಚಿರುವುದಾಗಿ ಇಲಾಖೆ ತಿಳಿಸಿದೆ.
ತಮಿಳುನಾಡಿನಲ್ಲಿ ಅಕ್ಟೋಬರ್ 19 ರಿಂದ 22ರವರೆಗೆ ಹಲವೆಡೆ ಭಾರೀ ಮಳೆಯ ಸಾಧ್ಯತೆ ಇದೆ. ಕೊಯಮತ್ತೂರು, ನೀಲಗಿರಿ, ಈರೋಡ್, ತಿರುಪ್ಪೂರು, ತೆಂಕಸಿ, ತಿರುನೆಲ್ವೇಲಿ ಹಾಗೂ ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ನಿರೀಕ್ಷೆಯಿದೆ.
ಅಕ್ಟೋಬರ್ 22ರಂದು ಉತ್ತರ ಕರಾವಳಿ ತಮಿಳುನಾಡಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿಯೂ ಮಧ್ಯಮದಿಂದ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಹವಾಮಾನವು ಪ್ರಕ್ಷುಬ್ಧವಾಗಿರಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.