ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಯುಪಿ ವಾರಿಯರ್ಸ್ ಸತತ ಎರಡನೇ ಬಾರಿ ಸೋಲಿನ ರುಚಿ ತೋರಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನ ನೀಡಿದ ಯುಪಿ ವಾರಿಯರ್ಸ್ 22 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆದರೆ, ಆರಂಭಿಕ ಆಘಾತದಿಂದ ತಂಡವನ್ನು ಚೇತರಿಸುವಂತೆ ಮಾಡಿದ್ದು ನಾಯಕಿ ಮೆಗ್ ಲ್ಯಾನಿಂಗ್ (70 ರನ್, 45 ಎಸೆತ) ಮತ್ತು ಫೋಬೆ ಲಿಚ್‌ಫೀಲ್ಡ್ (61 ರನ್, 37 ಎಸೆತ). ಈ ಜೋಡಿ ಎರಡನೇ ವಿಕೆಟ್‌ಗೆ ಬರೊಬ್ಬರಿ 119 ರನ್‌ಗಳ ಶತಕದ ಜೊತೆಯಾಟವಾಡಿ ತಂಡದ ಮೊತ್ತವನ್ನು 187ಕ್ಕೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಮುಂಬೈ ಪರ ಅಮೆಲಿಯಾ ಕೆರ್ 3 ವಿಕೆಟ್ ಪಡೆದು ಮಿಂಚಿದರು.
188 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ಆರಂಭವೇ ತಡವರಿಸಿತು. ಹೇಲಿ ಮ್ಯಾಥ್ಯೂಸ್, ಹರ್ಮನ್‌ಪ್ರೀತ್ ಕೌರ್ ಮತ್ತು ಬ್ರಂಟ್ ಅಂತಹ ಘಟಾನುಘಟಿ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು.
ಒಂದು ಹಂತದಲ್ಲಿ ಮುಂಬೈ ಸೋಲು ಖಚಿತ ಎನ್ನಿಸಿದಾಗ, ಅಮೆಲಿಯಾ ಕೆರ್ (ಅಜೇಯ 49) ಮತ್ತು ಅಮನ್‌ಜೋತ್ ಕೌರ್ (41) ಜೋಡಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಇವರು 45 ಎಸೆತಗಳಲ್ಲಿ 83 ರನ್ ಚಚ್ಚಿ ಪಂದ್ಯದಲ್ಲಿ ಜೀವ ತುಂಬಿದರು. ಆದರೆ, ಶಿಖಾ ಪಾಂಡೆ ಈ ಜೋಡಿಯನ್ನು ಬೇರ್ಪಡಿಸುವ ಮೂಲಕ ಮುಂಬೈ ಆಸೆಗೆ ತಣ್ಣೀರೆರಚಿದರು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 165 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಈ ಸೋಲಿನ ಹೊರತಾಗಿಯೂ ಮುಂಬೈ ಇಂಡಿಯನ್ಸ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಆದರೆ ಯುಪಿ ವಾರಿಯರ್ಸ್ ವಿರುದ್ಧ ಸತತ ಎರಡು ಸೋಲುಗಳು ತಂಡದ ಆತ್ಮವಿಶ್ವಾಸಕ್ಕೆ ಸಣ್ಣ ಪೆಟ್ಟು ನೀಡಿದೆ.


