Monday, December 29, 2025

ಹನಿಮೂನ್‌ನಲ್ಲಿ ಎಕ್ಸ್‌ಗರ್ಲ್‌ಫ್ರೆಂಡ್‌ ಬಗ್ಗೆ ಜಗಳವೇ ನವದಂಪತಿ ಸೂಸೈಡ್‌ಗೆ ರೀಸನ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನವ ದಂಪತಿ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಶ್ರೀಲಂಕಾದಲ್ಲಿ ಹನಿಮೂನ್ ನಲ್ಲಿದ್ದಾಗ ಗಾನವಿ ಹಳೆ ಪ್ರೀತಿ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಈ ರಾದ್ದಾಂತವೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಡಿಸೆಂಬರ್ 24ರಂದು ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಮೂರು ದಿನದಲ್ಲಿ ಡಿಸೆಂಬರ್ 28 ರಂದು ಆಕೆಯ ಪತಿ ಸೂರಜ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾನವಿ ಆತ್ಮಹತ್ಯೆಗೆ ಮೃತ ಸೂರಜ್ ಕುಟುಂಬಸ್ಥರೇ ಕಾರಣ ಅಂತ ಆಕೆಯ ಹೆತ್ತವರು​ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರು. ಅಲ್ಲದೇ ಸೂರಜ್ ವಿರುದ್ಧ ವರದಕ್ಷಣೆ ಆರೋಪ ಕೂಡಾ ಮಾಡಲಾಗಿತ್ತು. ಅವಮಾನಕರ ಹೇಳಿಕೆಗಳಿಂದ ಮನನೊಂದು ಸೂರಜ್ ಹಾಗೂ ಅವರ ತಾಯಿ ಹಾಗೂ ಸಹೋದರ ಸುಮಾರು 1,000 ಕಿಲೋ ಮೀಟರ್ ದೂರ ಇರುವ ನಾಗಪುರಕ್ಕೆ ಹೋಗಿದ್ರು. ಅಲ್ಲಿ ಮನನೊಂದಿದ್ದ ಸೂರಜ್ ಸೂಸೈಡ್​ ಮಾಡಿಕೊಂಡಿದ್ದರು. ಅವರ 60 ವರ್ಷದ ತಾಯಿ ಜಯಂತಿ ಶಿವಣ್ಣ ಕೂಡಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ, ಬದುಕುಳಿದಿದ್ದಾರೆ.

ಸೂರಜ್ ಶಿವಣ್ಣ ಹಾಗೂ ಗಾನವಿ ಅಕ್ಟೋಬರ್ 29 ರಂದು ಬೆಂಗಳೂರಿನಲ್ಲಿ ವಿವಾಹವಾಗಿದ್ದರು. ನವ ವಿವಾಹಿತ ಜೋಡಿ ಶ್ರೀಲಂಕಾಕ್ಕೆ10 ದಿನಗಳ ಹನಿಮೂನ್ ಗೆ ತೆರಳಿತ್ತು. ಆದರೆ, ಅಲ್ಲಿ ಗಾನವಿ ಮದುವೆಗೂ ಮುನ್ನಾ ಬೇರೆ ಯುವಕನ ಜೊತೆಗೆ ಇದ್ದ ಸಂಬಂಧದ ಬಗ್ಗೆ ಹೇಳಿಕೊಂಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ, ಗಲಾಟೆ ನಡೆದಿದೆ. ಈ ವೇಳೆ ಸೂರಜ್ ಜೊತೆಗೆ ಮುಂದುವರೆಯಲು ಇಷ್ಟವಿಲ್ಲ ಎಂದು ಗಾನವಿ ಹೇಳಿದ್ದಾಳೆ ಎನ್ನಲಾಗಿದೆ. ನಂತರ 10 ದಿನಗಳ ಹನಿಮೂನ್ ಅರ್ಧಕ್ಕೆ ಐದನೇ ದಿನಕ್ಕೆ ಮುಗಿದಿದ್ದು, ಇಬ್ಬರು ಶ್ರೀಲಂಕಾದಿಂದ 25 ರ ಬದಲು ಡಿಸೆಂಬರ್ 21 ರಂದು ವಾಪಸ್ ಆಗಿದ್ರು.

ಸೂರಜ್ ಮತ್ತು ಗಾನವಿ ಬೆಂಗಳೂರಿಗೆ ಮರಳಿದ ನಂತರ ಕುಟುಂಬಸ್ಥರು ರಾಜಿ ಪಂಚಾಯಿತಿ ಮಾಡಿದ್ದಾರೆ. ಆದರೆ ಯಾವುದು ವರ್ಕ್ ಔಟ್ ಆಗಿಲ್ಲ. ಡಿಸೆಂಬರ್ 24 ರಂದು ಅಪ್ಪನ ಮನೆಗೆ ಹೋದ ಗಾನವಿ ನೇಣು ಬಿಗಿದುಕೊಂಡಿದ್ದಾಳೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಸಾವನ್ನಪ್ಪಿದ್ದಾಳೆ.

ಬಳಿಕ ಸೂರಜ್ ಮತ್ತು ಆತನ ಸಂಬಂಧಿಕರು ವರದಕ್ಷಣೆಗಾಗಿ ಪೀಡಿಸಿದ್ದಾರೆ ಎಂದು ಆಕೆಯ ಆಕೆಯ ಕುಟುಂಬದವರು ಆರೋಪಿಸಿದ್ದು, ಆತನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿದ್ದಾರೆ. ಕಠಿಣ ಕ್ರಮಕ್ಕೆ ಆಗ್ರಹಿಸಿ ಮಹಿಳೆಯ ಕುಟುಂಬಸ್ಥರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಸುಮಾರು 30 ಮಂದಿ ಸೂರಜ್ ಅವರ ಮನೆ ಮೇಲೆ ಮುತ್ತಿಗೆ ಹಾಕಿದ್ದು, ಆತನಿಗಾಗಿ ಹುಡುಕಾಟ ನಡೆಸಿದರು. ಇದರಿಂದ ಭಯಭೀತಿಯಲ್ಲಿ ಬೆಂಗಳೂರಿನಿಂದ ತಪ್ಪಿಸಿಕೊಳ್ಳುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ ಎಂದು ಸಂಜಯ್ ಸೂರಜ್ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ವರದಕ್ಷಿಣೆ ಆರೋಪವನ್ನು ತಳ್ಳಿಹಾಕಿರುವ ಸಂಜಯ್, ಅಂತಹ ಯಾವುದೇ ಬೇಡಿಕೆಯನ್ನು ನಾವು ಮಾಡಿಲ್ಲ. ಮದುವೆ ಖರ್ಚನೆಲ್ಲಾ ನಾವೇ ಮಾಡಿದ್ದೇವು. ಈಗಿರುವಾಗ ಇಂತಹ ಆರೋಪ ಮಾಡುತ್ತಿರುವುದು ಆಘಾತ ಮೂಡಿಸಿದೆ. ಅಲ್ಲದೇ ಗಾನವಿ ಮನೆಯವರು ಕೊಲೆ ಬೆದರಿಕೆ ಹಾಕಲು ಆರಂಭಿಸಿದ್ದರು. ಭಯಗೊಂಡು ಸೂರಜ್ ಕ್ಷಮೆಯಾಚಿಸಿದ ಎಂದು ಅವರು ತಿಳಿಸಿದ್ದಾರೆ.

ಡಿಸೆಂಬರ್ 23 ರಂದು, ಸೂರಜ್, ಅವರ ತಾಯಿ ಜಯಂತಿ ಮತ್ತು ಸಹೋದರ ಸಂಜಯ್ ಹೈದರಾಬಾದ್‌ಗೆ ಹೋಗಿದ್ದಾರೆ. ಮರುದಿನ ಅವರು ನಾಗ್ಪುರಕ್ಕೆ ತೆರಳಿದ್ದು, ಶುಕ್ರವಾರ ತಡರಾತ್ರಿ ಮಹಾರಾಷ್ಟ್ರದ ನಾಗ್ಪುರದ ಸೋನೆಗಾಂವ್ ಪೊಲೀಸ್ ವ್ಯಾಪ್ತಿಯ ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ಅವರು ಕಾಯ್ದಿರಿಸಿದ್ದಾರೆ. ಮಧ್ಯರಾತ್ರಿಯ ನಂತರ ದುರಂತ ಸಂಭವಿಸಿದೆ. ಸೂರಜ್ ದುಪಟ್ಟಾ ಬಳಸಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ.

error: Content is protected !!