April 12, 2026
Sunday, April 12, 2026
spot_img

ಮಗಳ ಪ್ರೇಮಕ್ಕೆ ಅಡ್ಡಿಯಾದದ್ದೇ ಅಪರಾಧವಾಯಿತೇ? ಸೇಡಿನ ಜ್ವಾಲೆಗೆ ಬೆಂದು ಹೋದ ಸಂಸಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೀತಿಯ ಹೆಸರಿನಲ್ಲಿ ಜೈಲು ಪಾಲಾಗಿದ್ದ ಯುವಕನೊಬ್ಬ, ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ತನ್ನ ಪ್ರೇಯಸಿಯ ತಾಯಿಯನ್ನೇ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದಲ್ಲಿ ನಡೆದಿದೆ. 38 ವರ್ಷದ ರೇಣುಕಾ ಕೊಲೆಯಾದ ದುರ್ದೈವಿ.

2023ರಲ್ಲಿ ಇದೇ ಗ್ರಾಮದ ರಂಜಿತ್ ಕುಮಾರ್ ಎಂಬಾತ ರೇಣುಕಾ ಅವರ ಮಗಳನ್ನು ಪ್ರೀತಿಸುತ್ತಿದ್ದ. ಮದುವೆ ಪ್ರಸ್ತಾಪ ಹೊತ್ತು ಮನೆಗೆ ಬಂದಾಗ ರೇಣುಕಾ ನಿರಾಕರಿಸಿದ್ದರು. ಅಷ್ಟೇ ಅಲ್ಲದೆ, ಮಗಳ ಜೀವನ ಹಾಳು ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ ರಂಜಿತ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಈ ಕೇಸಿನಿಂದಾಗಿ ಜೈಲು ಪಾಲಾಗಿದ್ದ ರಂಜಿತ್, ರೌಡಿಶೀಟರ್ ಪಟ್ಟಿಯನ್ನೂ ಸೇರಿದ್ದ.

2024ರಲ್ಲಿ ಜೈಲಿನಿಂದ ಹೊರಬಂದಿದ್ದ ರಂಜಿತ್, ರೇಣುಕಾ ಕಂಡರೆ ಸಾಕು ಕೆಂಡವಾಗುತ್ತಿದ್ದ. ಇತ್ತೀಚೆಗೆ ರೇಣುಕಾ ಮನೆಯ ಮುಂದೆ ಇದ್ದಾಗ ರಂಜಿತ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ರಂಜಿತ್, ಆತನ ತಾಯಿ ರಾಧಮ್ಮ ಮತ್ತು ಅಣ್ಣ ನವೀನ್ ಜೊತೆಗೂಡಿ ರೇಣುಕಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ರೇಣುಕಾ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ.

ತಡೆಯಲು ಬಂದ ರೇಣುಕಾ ಮಗ ಮತ್ತು ತಾಯಿಯ ಮೇಲೆಯೂ ಈ ಗುಂಪು ಹಲ್ಲೆ ನಡೆಸಿದೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ವಿಶ್ವನಾಥಪುರ ಪೊಲೀಸರು ಪತ್ತೆಗಾಗಿ ಬಲೆ ಬೀಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !