March 12, 2026
Thursday, March 12, 2026
spot_img

ನಿಮ್ಮ ಆಸ್ತಿ ಸಮೀಕ್ಷೆಯಲ್ಲಿ ಬಿಟ್ಟು ಹೋಗಿದೆಯೇ? ಚಿಂತಿಸಬೇಡಿ, ಈಗ ಜಿಲ್ಲಾ ಪಂಚಾಯಿತಿಯೇ ಪರಿಹಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಹೊಸ ನಿಯಮಗಳು ಜಾರಿಗೆ ಬರುವ ಮುನ್ನ ಅಸ್ತಿತ್ವದಲ್ಲಿದ್ದರೂ, ಸಮೀಕ್ಷೆಯ ಸಂದರ್ಭದಲ್ಲಿ ದಾಖಲೆಗಳಿಂದ ವಂಚಿತವಾದ ಕಟ್ಟಡ ಮತ್ತು ನಿವೇಶನಗಳ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇಂತಹ ಆಸ್ತಿಗಳ ಮಾಲೀಕರು ಇನ್ನು ಮುಂದೆ ನೇರವಾಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ 2025ರ ಅನ್ವಯ, ಹೊಸ ನಿಯಮಗಳು ಜಾರಿಯಾಗುವ ಮೊದಲು ಸೃಜನೆಯಾಗಿದ್ದ ಆಸ್ತಿಗಳನ್ನು ಪಂಚಾಯಿತಿಗಳು ಸಮೀಕ್ಷೆಯಲ್ಲಿ ಕೈಬಿಟ್ಟಿದ್ದರೆ ಅಥವಾ ಪಂಚಾಯಿತಿಯ ತೀರ್ಮಾನದಿಂದ ನಾಗರಿಕರಿಗೆ ಅನ್ಯಾಯವಾಗಿದ್ದರೆ, ಅಂತಹ ಬಾಧಿತ ವ್ಯಕ್ತಿಗಳು ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಡಿಸೆಂಬರ್ 1, 2025 ರಿಂದ ನಾಗರಿಕ ಸ್ನೇಹಿಯಾದ ‘ಇ-ಸ್ವತ್ತು 2.0’ ತಂತ್ರಾಂಶ ಜಾರಿಗೆ ಬಂದಿದೆ. ಏಪ್ರಿಲ್ 7, 2025 ಕ್ಕಿಂತ ಮೊದಲು ನಿರ್ಮಾಣವಾದ ಕಟ್ಟಡಗಳು ಅಥವಾ ನಿವೇಶನಗಳು ಪಂಚತಂತ್ರದಲ್ಲಿ ದಾಖಲಾಗದಿದ್ದರೆ, ಮಾಲೀಕರು ಇ-ಸ್ವತ್ತು 2.0 ನ ‘ಸಿಟಿಜನ್ ಇಂಟರ್ ಫೇಸ್’ ಮೂಲಕ ಹೊಸ ನಮೂನೆ-11ಬಿ ಗಾಗಿ ಅರ್ಜಿ ಸಲ್ಲಿಸಬಹುದು.

ಇದುವರೆಗೆ ರಾಜ್ಯಾದ್ಯಂತ 27,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಂದಲೇ 26,000 ಅರ್ಜಿಗಳು ಬಂದಿರುವುದು ವಿಶೇಷ.

ಈ ಕ್ರಮವು ಆಸ್ತಿ ದಾಖಲಾತಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದಲ್ಲದೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ ನಾಗರಿಕರು ತಮ್ಮ ಹಕ್ಕನ್ನು ಪಡೆಯಲು ಸಹಕಾರಿಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !