Sunday, October 12, 2025

ಕಾಂತಾರ ಸಿನಿಮಾವಾಗಿಯೇ ನೋಡಿ, ನಿಂದನೆ ಮಾಡಬೇಡಿ: ದೈವ ಆರಾಧಕರು-ನರ್ತಕರ ಸಂಘ ಆಕ್ಷೇಪ

ಹೊಸ ದಿಗಂತ ವರದಿ,ಮಡಿಕೇರಿ:‌

ಕಾಂತಾರ ಸಿನಿಮಾವನ್ನು ಸಿನಿಮಾ ರೀತಿಯಲ್ಲಿ ನೋಡಬೇಕಾದ ಸಿನಿ ಪ್ರೇಕ್ಷಕರು ದೈವವನ್ನು ಅಪಮಾನ, ಅಪಹಾಸ್ಯ, ನಿಂದನೆ ಮಾಡುವ ಮೂಲಕ ದೈವಾರಾಧನೆ ಮಾಡುವ ದೈವ ನರ್ತನ ಮಾಡುವವರಿಗೆ ಅವಮಾನ, ಅಪಚಾರ ಮಾಡದಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯ ಹಾಗೂ ದೈವ ಆರಾಧಕರು ಮತ್ತು ದೈವನರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಪಿ ಎಂ ರವಿ ಮತ್ತು ಸಂಘದ ಅಧ್ಯಕ್ಷ ಸದಾಶಿವ ರೈ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ಕರಾವಳಿ ಭಾಗದ ದೈವ ಆರಾಧನೆಗೆ ಸಾವಿರಾರು ವರ್ಷದ ಇತಿಹಾಸವಿದ್ದು, ದೈವ ಆರಾಧನೆಯು ಗುರು ಹಿರಿಯರು ಹಾಕಿಕೊಟ್ಟಿರುವ ಮೂಲನಂಬಿಕೆ, ಮೂಲ ಆಧಾರ, ಮೂಲ ಪದ್ದತಿಯಾಗಿದೆ. ಕಾಂತಾರ ಸಿನಿಮಾದಿಂದ ತುಳುನಾಡಿನ ದೈವ ಆರಾಧನೆಯು ಅದರ ಹಿನ್ನಲೆ ಜಗತ್ತಿಗೆ ಪರಿಚಯವಾಗಿದ್ದು ಸತ್ಯ. ಆದರೆ ಸಿನಿಮಾವನ್ನು ಸಿನಿಮಾ ರೀತಿಯಲ್ಲಿ ನೋಡಬೇಕಾದ ಸಿನಿ ಪ್ರೇಕ್ಷಕರು ದೈವವನ್ನು ಅಪಮಾನ, ಅಪಹಾಸ್ಯ ನಿಂದನೆ ಮಾಡುವ ಮೂಲಕ ದೈವಾರಾಧನೆ ಮಾಡುವ ದೈವ ನರ್ತನ ಮಾಡುವವರಿಗೆ ಅವಮಾನ ಅಪಚಾರ ಮಾಡಬಾರದು ಎಂದು ಹೇಳಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಗೊಂಡ ನಂತರ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯ ವಿದೇಶಗಳಲ್ಲಿ ಸಿನಿಮಾ ಬಿಡುಗಡೆಗೊಂಡಿದ್ದು, ಅನೇಕ ಥಿಯೇಟರ್’ಗಳಲ್ಲಿ ಸಿನಿಮಾ ಪ್ರದರ್ಶನದ ಸಂದರ್ಭ ದೈವವು ಮೈಮೇಲೆ ಬಂದು ಆವೇಶಭರಿತವಾಗಿ ಕಿರುಚುವುದು ವರ್ತಿಸುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ.ಆದರೂ ಕೂಡಾ ಬುದ್ಧಿ ಇಲ್ಲದ ಕಿಡಿಗೇಡಿಗಳು ಮತ್ತೆ ಮತ್ತೆ ದೈವವನ್ನು ಅಪಮಾನ, ಅಪಹಾಸ್ಯ ಮಾಡುವುದಲ್ಲದೆ ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣದಲ್ಲಿ ದೈವನಿಂದನೆ ಆಗುತ್ತಿದ್ದು, ಇದರಿಂದ ದೈವ ಆರಾಧಕರಿಗೆ, ದೈವ ನರ್ತಕರಿಗೆ ನೊವುಂಟಾಗಿದೆ. ಕಳೆದ ಬಾರಿಯೂ ಕಾಂತಾರ ಬಿಡುಗಡೆಗೊಂಡ ನಂತರದ ದಿನದಲ್ಲಿ ಶಾಲೆಯ ವಾರ್ಷಿಕೋತ್ಸವ, ಛದ್ಮವೇಷ ಸ್ಪರ್ಧೆ, ಮಕ್ಕಳ ಪ್ರತಿಭಾ ಕಾರಂಜಿ, ರಂಗೋತ್ಸವ, ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಖಾಸಗಿ ಕಾರ್ಯಕ್ರಮದ ವೇದಿಕೆಗಳಲ್ಲಿ ದೈವ ನರ್ತನ ಕಾರ್ಯಕ್ರಮ ಪ್ರದರ್ಶನ ನಡೆಸುತ್ತಿದ್ದುದನ್ನು ಖಂಡಿಸಿದ್ದೇವೆ. ಅಂತೆಯೇ ಇನ್ನು ಮುಂದೆಯೂ ಯಾರೂ ಈ ರೀತಿಯಲ್ಲಿ ದೈವವನ್ನು ಹಗುರವಾಗಿ ಕಾಣುವುದನ್ನು ಮತ್ತು ಅಪಹಾಸ್ಯವಾಗಿ ದೈವದ ನೃತ್ಯವನ್ನು ಮಾಡುವುದನ್ನು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಾಕುವುದನ್ನು ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ಖಂಡಿಸುತ್ತದೆ ಎಂದು ರವಿ ಹಾಗೂ ಸದಾಶಿವ ರೈ ಹೇಳಿದ್ದಾರೆ.

error: Content is protected !!