April 14, 2026
Tuesday, April 14, 2026
spot_img

ಮಧ್ಯಪ್ರಾಚ್ಯ ಯುದ್ಧದ ಮಧ್ಯೆ ನೀರಿನ ಸಂಕಷ್ಟ: ಗಲ್ಫ್ ರಾಷ್ಟ್ರಗಳಿಗೆ ಎದುರಾಗಿದೆ ದೊಡ್ಡ ಸವಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧದ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ತೈಲ ಪೂರೈಕೆ ಕುರಿತ ಚರ್ಚೆ ಮಾತ್ರವಲ್ಲ, ಈಗ ನೀರಿನ ಭದ್ರತೆಗೂ ಗಂಭೀರ ಆತಂಕ ವ್ಯಕ್ತವಾಗುತ್ತಿದೆ. ನಿರಂತರ ಕ್ಷಿಪಣಿ ದಾಳಿಗಳು, ಸೈಬರ್ ದಾಳಿಗಳು ಮತ್ತು ಪ್ರಮುಖ ಮೂಲಸೌಕರ್ಯಗಳ ಮೇಲೆ ಸಂಭವಿಸಬಹುದಾದ ಹಾನಿಯಿಂದ ಗಲ್ಫ್ ರಾಷ್ಟ್ರಗಳಲ್ಲಿ ಕುಡಿಯುವ ನೀರಿನ ಪೂರೈಕೆ ಅಸ್ಥಿರವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಗಲ್ಫ್ ಪ್ರದೇಶದಲ್ಲಿ ನೈಸರ್ಗಿಕವಾಗಿ ತಾಜಾ ನೀರಿನ ಸಂಪನ್ಮೂಲಗಳು ಕಡಿಮೆ ಇರುವುದರಿಂದ, ಹೆಚ್ಚಿನ ದೇಶಗಳು ಸಮುದ್ರದ ಉಪ್ಪುನೀರನ್ನು ಶುದ್ಧೀಕರಿಸುವ ಡಿಸಾಲಿನೇಶನ್ ಘಟಕಗಳ ಮೇಲೆ ಅವಲಂಬಿತವಾಗಿವೆ. ಜಾಗತಿಕವಾಗಿ ಉತ್ಪಾದನೆಯಾಗುವ ಉಪ್ಪುರಹಿತ ನೀರಿನಲ್ಲಿ ಸುಮಾರು 40 ಶೇಕಡಾ ಪಾಲು ಈ ಪ್ರದೇಶದಲ್ಲೇ ಉತ್ಪಾದನೆಯಾಗುತ್ತದೆ. ಆದರೆ ಈ ಘಟಕಗಳು ವಿದ್ಯುತ್, ತೈಲ ಮತ್ತು ಅನಿಲದ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಯುದ್ಧದ ಸಂದರ್ಭದಲ್ಲಿ ಅವು ದುರ್ಬಲವಾಗಬಹುದು.

ಇದನ್ನೂ ಓದಿ:

ಕತಾರ್ ಪ್ರಧಾನಿ ಕಳೆದ ವರ್ಷ ನೀಡಿದ ಎಚ್ಚರಿಕೆಯಲ್ಲಿ, ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆದರೆ ಸಮುದ್ರ ನೀರು ಮಾಲಿನ್ಯಗೊಳ್ಳುವ ಅಪಾಯವಿದ್ದು, ಕತಾರ್, ಯುಎಇ ಮತ್ತು ಕುವೈತ್‌ನಲ್ಲಿ ಕುಡಿಯುವ ನೀರಿನ ಭಾರೀ ಸಮಸ್ಯೆ ಉಂಟಾಗಬಹುದು ಎಂದು ಹೇಳಿದ್ದಾರೆ. ಈ ಹಿನ್ನೆಲೆ ಕತಾರ್ ತುರ್ತು ಪರಿಸ್ಥಿತಿಯನ್ನು ಎದುರಿಸಲು ದೊಡ್ಡ ನೀರಿನ ಜಲಾಶಯಗಳನ್ನು ನಿರ್ಮಿಸಿದೆ.

ಇನ್ನೊಂದೆಡೆ, ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ಗೆ ಜುಬೈಲ್ ಉಪ್ಪುನೀರು ಶುದ್ಧೀಕರಣ ಘಟಕವೇ ಪ್ರಮುಖ ಮೂಲವಾಗಿದೆ. ಈ ಘಟಕ ಅಥವಾ ಅದರ ಪೈಪ್‌ಲೈನ್‌ಗಳಿಗೆ ಹಾನಿಯಾದರೆ ನಗರದಲ್ಲಿ ಒಂದು ವಾರದೊಳಗೆ ಕುಡಿಯುವ ನೀರಿನ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆಗಳು ಸೂಚಿಸುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !