ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಅತ್ಯಂತ ಸ್ವಚ್ಛ ನಗರವೆಂದು ಹೆಸರು ಮಾಡಿದ್ದ ಮಧ್ಯಪ್ರದೇಶದ ಇಂದೋರ್ ನಗರ ಇದೀಗ ಗಂಭೀರ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. 2026ರ ಆರಂಭದಲ್ಲೇ ಭಾಗೀರಥಪುರ ಪ್ರದೇಶದಲ್ಲಿ ಪುರಸಭೆ ಸರಬರಾಜು ಮಾಡುವ ಕುಡಿಯುವ ನೀರು ಕಲುಷಿತಗೊಂಡ ಪರಿಣಾಮ ಭಾರಿ ಅನಾಹುತ ಸಂಭವಿಸಿದೆ. ನೀರಿನಲ್ಲಿ ದುರ್ವಾಸನೆ, ಕಹಿ ರುಚಿ ಮತ್ತು ಬಣ್ಣ ಬದಲಾವಣೆ ಕಂಡುಬಂದಿದ್ದು, ಅದನ್ನು ಸೇವಿಸಿದ ನಿವಾಸಿಗಳಲ್ಲಿ ವಾಂತಿ, ಅತಿಸಾರ, ಜ್ವರ ಹಾಗೂ ನಿರ್ಜಲೀಕರಣದ ಲಕ್ಷಣಗಳು ಕಾಣಿಸಿಕೊಂಡಿವೆ.
ಸ್ಥಳೀಯ ಆಸ್ಪತ್ರೆಗಳಿಗೆ ಏಕಾಏಕಿ ರೋಗಿಗಳ ಪ್ರವಾಹ ಹರಿದುಬಂದಿದ್ದು, ಇದುವರೆಗೂ ಕಲುಷಿತ ನೀರು ಸೇವನೆಯಿಂದ 9 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 200ಕ್ಕೂ ಹೆಚ್ಚು ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲ್ಯಾಬ್ ವರದಿಗಳ ಪ್ರಕಾರ, ನೀರಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಇದುವೇ ಸಾವಿಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭಿಕ ತನಿಖೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಕೊಳಚೆನೀರು ಮಿಶ್ರಣಗೊಂಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಾರಣರಾದ ಇಂಜಿನಿಯರ್ ಹಾಗೂ ವಲಯಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಒಬ್ಬ ಇಂಜಿನಿಯರ್‌ರನ್ನು ವಜಾಗೊಳಿಸಲಾಗಿದೆ. ಪ್ರಸ್ತುತ ನೀರು ಪೈಪ್‌ಲೈನ್ ದುರಸ್ತಿ ಕಾರ್ಯ ನಡೆಯುತ್ತಿದೆ.

