ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಪಹಲ್ಗಾಮ್ ದಾಳಿ ಬಳಿಕ ಪಾಕ್ ವಿರುದ್ಧ ಭಾರತವು ಎಲ್ಲಾ ವ್ಯವಹಾರಗಳು ಬಂದ್ ಮಾಡಿದೆ. ಇದೀಗ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ ಟೂರ್ನಿ( WCL) ಆಡುತ್ತಿರುವ ಯುವರಾಜ್ ಸಿಂಗ್ ನೇತೃತ್ವದ ಭಾರತದ ಹಿರಿಯರ ತಂಡ ಕೂಡ ಪಾಕ್ ಜೊತೆ ಮ್ಯಾಚ್ ಆಡದಿರಲು ನಿರ್ಧರಿಸಿದೆ.
ಸದ್ಯ WCL ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಇತ್ತ ಭಾರತಕ್ಕೆ ಎದುರಾಳಿಯಾಗಿ ಪಾಕಿಸ್ತಾನ ಆಗಮಿಸಿದೆ. ಆದ್ರೆ ಭಾರತ ಚಾಂಪಿಯನ್ಸ್, ಪಾಕಿಸ್ತಾನ ವಿರುದ್ಧ ಸೆಮಿಫೈನಲ್ ಆಡುವುದಿಲ್ಲ ಎಂದಿದೆ.
ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 13.2 ಓವರ್‌ಗಳಲ್ಲಿ ಮಣಿಸಿದ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಜೊತೆ ಆಡಲು ಸಾಧ್ಯವಿಲ್ಲ ಎಂದಿದೆ. ಇಷ್ಟೇ ಅಲ್ಲ ಪಂದ್ಯಕ್ಕಿಂತ ದೇಶ ಮುಖ್ಯ ಅನ್ನೋ ಸಂದೇಶ ಸಾರಿದೆ.
WCL ಟೂರ್ನಿಯ ಗ್ರೂಪ್ ಹಂತದಲ್ಲೂ ಭಾರತ ಪಾಕಿಸ್ತಾನ ಮುಖಾಮುಖಿಯಾಗಬೇಕಿತ್ತು. ಆದರೆ ನಾಯಕ ಯುವರಾಜ್ ಸಿಂಗ್ ನೇತೃತ್ವದ ತಂಡ ಪಾಕಿಸ್ತಾನ ವಿರುದ್ಧದ ಪಂದ್ಯ ಬಹಿಷ್ಕರಿಸಿತ್ತು. ಇದೀಗ ಮತ್ತೆ ಸೆಮಿಫೈನಲ್ ಪಂದ್ಯವನ್ನೂ ಬಹಿಷ್ಕರಿಸಿದೆ.
ಭಾರತ ಚಾಂಪಿಯನ್ಸ್ ತಂಡ ಸ್ಟಾರ್ ಆಟಗಾರರನ್ನೊಳಗೊಂಡಿದೆ. ಯುವವಾಜ್ ಸಿಂಗ್ ನಾಯಕನಾಗಿದ್ದರೆ, ಸುರೇಶ್ ರೈನಾ, ಶಿಖರ್ ಧವನ್, ಇರ್ಫಾನ್ ಪಠಾನ್, ಯೂಸೂಫ್ ಪಠಾಣ್, ಸ್ಟುವರ್ಟ್ ಬಿನ್ನಿ ಸೇರಿದಂತೆ ಹಲವು ದಿಗ್ಗಜರು ಈ ತಂಡದಲ್ಲಿ ಆಡುತ್ತಿದ್ದಾರೆ. ಈ ಪೈಕಿ ಶಿಖರ್ ಧವನ್ ಹಾಗೂ ಸುರೇಶ್ ರೈನಾ ಬಹಿರಂಗವಾಗಿ ತಾವು ಪಾಕಿಸ್ತಾನದ ಜೊತೆ ಪಂದ್ಯವಾಡುದಿಲ್ಲ ಎಂದು ಆರಂಭದಲ್ಲೇ ಘೋಷಿಸಿದ್ದರು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಬೇಕಿತ್ತು. ಈ ಪಂದ್ಯ ಜುಲೈ 31ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಆಯೋಜಿಸಲಾಗಿದೆ. ಆದರೆ ಈ ಪಂದ್ಯದಿಂದ ಭಾರತ ಹಿಂದೆ ಸರಿದಿದಿದೆ. ಸೆಮಿಫೈನಲ್ ಪಂದ್ಯವನ್ನು ಭಾರತ ಬಹಿಷ್ಕರಿಸಿದೆ. ಹೀಗಾಗಿ ಪಾಕಿಸ್ತಾನ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಭಾರತ ಟೂರ್ನಿಯಿಂದ ಹೊರಬೀಳಲಿದೆ. ಇನ್ನು 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ.