ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಮಾರ್ಕ್’ ಸಿನಿಮಾ ಇದೇ ಡಿಸೆಂಬರ್ 25ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಈ ಸಂಭ್ರಮದ ಅಂಗವಾಗಿ ಡಿಸೆಂಬರ್ 20ರ ಸಂಜೆ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೀ-ರಿಲೀಸ್ ಕಾರ್ಯಕ್ರಮವು ಅಭಿಮಾನಿಗಳ ಸಾಗರವನ್ನೇ ಸಾಕ್ಷೀಕರಿಸಿತು.
ವೇದಿಕೆ ಮೇಲೆ ಮಾತನಾಡಿದ ಸುದೀಪ್ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. “2003ರ ನಂತರ ಇಲ್ಲಿಗೆ ಬಂದು ಕಾರ್ಯಕ್ರಮ ಮಾಡಲು ಇವತ್ತೇ ಅವಕಾಶ ಸಿಕ್ಕಿದ್ದು. ಹುಬ್ಬಳ್ಳಿಯ ಪ್ರೀತಿ ಮತ್ತು ಬೆಂಬಲ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಇಲ್ಲಿಂದ ಆಡುವ ಮಾತು ಇಡೀ ಕರ್ನಾಟಕಕ್ಕೆ ತಟ್ಟಲಿದೆ” ಎಂದು ಭಾವುಕರಾಗಿ ನುಡಿದರು.
ಜುಲೈ 5ರಂದು ನೀಡಿದ್ದ ಭರವಸೆಯಂತೆ ಡಿಸೆಂಬರ್ 25ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ ಸುದೀಪ್, “25ಕ್ಕೆ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ, ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗುತ್ತಿದೆ. ನಾವು ನಮ್ಮ ಮಾತಿಗೆ ಬದ್ಧ, ಈಗ ಯುದ್ಧಕ್ಕೆ ಸಿದ್ಧರಾಗಿ” ಎನ್ನುವ ಮೂಲಕ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದರು.
ಚಿತ್ರತಂಡದ ಸದಸ್ಯರು, ತಂತ್ರಜ್ಞರು ಮತ್ತು ಗಣ್ಯರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ‘ಮಾರ್ಕ್’ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

