ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಚಿನ್ನ ಕೇವಲ ಆಭರಣವಲ್ಲ, ಅದು ಪರಂಪರೆ, ಭದ್ರತೆ ಮತ್ತು ಆರ್ಥಿಕ ಆಶ್ರಯದ ಸಂಕೇತ. ಹಬ್ಬ–ಹರಿದಿನಗಳಿಂದ ಮದುವೆ ಸಮಾರಂಭಗಳವರೆಗೆ, ಸಂಕಷ್ಟದ ಸಮಯದಿಂದ ಹೂಡಿಕೆ ನಿರ್ಣಯಗಳವರೆಗೆ ಚಿನ್ನ ಭಾರತೀಯ ಬದುಕಿನ ಭಾಗವೇ ಆಗಿದೆ. ಈಗ ಇದೇ ಹಳದಿ ಲೋಹ ಭಾರತೀಯ ಕುಟುಂಬಗಳ ಕೈಯಲ್ಲಿ ಐತಿಹಾಸಿಕ ಮಟ್ಟ ತಲುಪಿದ್ದು, ಅದರ ಒಟ್ಟು ಮೌಲ್ಯ ದೇಶದ ಇಡೀ ಜಿಡಿಪಿಗಿಂತಲೂ ಹೆಚ್ಚಾಗಿದೆ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
ಪ್ರಮುಖ ಹಣಕಾಸು ಸಂಸ್ಥೆ ಮಾರ್ಗನ್ ಸ್ಟಾನ್ಲಿ ಬಿಡುಗಡೆ ಮಾಡಿದ ಅಧ್ಯಯನ ವರದಿ ಪ್ರಕಾರ, ಭಾರತೀಯ ಕುಟುಂಬಗಳು ಒಟ್ಟಾರೆ ಸುಮಾರು 34,600 ಟನ್ ಚಿನ್ನವನ್ನು ಹೊಂದಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ ಸುಮಾರು 4,550 ಡಾಲರ್ ಮಟ್ಟದಲ್ಲಿರುವುದರಿಂದ, ಈ ಚಿನ್ನದ ಒಟ್ಟು ಮೌಲ್ಯ ಅಂದಾಜು 5 ಟ್ರಿಲಿಯನ್ ಡಾಲರ್‌ಗಳಷ್ಟಾಗಿದೆ. ಇತ್ತ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಅಂದಾಜಿನಂತೆ ಭಾರತದ ಪ್ರಸ್ತುತ ಜಿಡಿಪಿ ಸುಮಾರು 4.1 ಟ್ರಿಲಿಯನ್ ಡಾಲರ್. ಅಂದರೆ, ಮನೆಯೊಳಗಿನ ಚಿನ್ನದ ಸಂಪತ್ತು ರಾಷ್ಟ್ರದ ವಾರ್ಷಿಕ ಆರ್ಥಿಕ ಉತ್ಪಾದನೆಗಿಂತಲೂ ದೊಡ್ಡದಾಗಿದೆ.
ಇದನ್ನೂ ಓದಿ:
ಚಿನ್ನದ ಬೆಲೆ ಏರಿಕೆಯಿಂದ ಮನೆಮನೆಗಳ ಕೂಡಿಟ್ಟಿರುವ ಸಂಪತ್ತು ಹೆಚ್ಚಾಗುತ್ತಿದೆ ಎಂದು ಭಾರತೀಯರು ನಂಬಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಈ ಸಂಪತ್ತಿನ ಬಹುಪಾಲು ಆಭರಣ ರೂಪದಲ್ಲೇ ಉಳಿದುಕೊಂಡಿದ್ದು, ನೇರ ಆದಾಯ ನೀಡುವ ಆಸ್ತಿಯಾಗಿಲ್ಲ ಎನ್ನುವುದು ವಿರೋಧಾಭಾಸ. ಎಂಕೆ ಗ್ಲೋಬಲ್ ವರದಿ ಪ್ರಕಾರ, ಭಾರತೀಯರು ಹೊಂದಿರುವ ಶೇ.75–80ರಷ್ಟು ಚಿನ್ನ ಆಭರಣಗಳಾಗಿಯೇ ಇದೆ.
ಜಗತ್ತಿನಲ್ಲಿ ಚಿನ್ನ ಖರೀದಿಸುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ಜಾಗತಿಕ ಬೇಡಿಕೆಯ ಶೇ.26ರಷ್ಟು ಪಾಲು ಭಾರತದದು. ಆಭರಣಗಳ ಜೊತೆಗೆ ಬಾರ್‌ಗಳು ಮತ್ತು ನಾಣ್ಯಗಳ ಮೂಲಕ ಹೂಡಿಕೆಯೂ ಹೆಚ್ಚಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ 2024ರಿಂದ ಸುಮಾರು 75 ಟನ್ ಚಿನ್ನ ಖರೀದಿಸಿದ್ದು, ಒಟ್ಟು ಸಂಗ್ರಹ 880 ಟನ್‌ಗಳಿಗೆ ಏರಿದೆ. ಜಾಗತಿಕ ಅನಿಶ್ಚಿತತೆ, ಹಣದುಬ್ಬರ ಮತ್ತು ಆರ್ಥಿಕ ಅಸ್ಥಿರತೆ ನಡುವೆ ಭಾರತೀಯರ ಚಿನ್ನದ ಮೇಲಿನ ನಂಬಿಕೆ ಮತ್ತಷ್ಟು ಗಟ್ಟಿಯಾಗುತ್ತಿರುವುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ.

