Saturday, August 30, 2025

ನಾವು ಯಾರೊಂದಿಗೂ ಶತ್ರುತ್ವ ಬಯಸಲ್ಲ, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಯಾವುದೇ ರಾಜಿ ಇಲ್ಲ: ರಾಜನಾಥ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಿರುವ ಬೆನ್ನಲ್ಲೇ ತಿರುಗೇಟು ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಶಾಶ್ವತ ಮಿತ್ರ ಅಥವಾ ಶತ್ರು ಯಾರೂ ಇಲ್ಲ, ಕೇವಲ ರಾಷ್ಟ್ರೀಯ ಹಿತಾಸಕ್ತಿಗಳು ಮಾತ್ರ ಶಾಶ್ವತ’ ಎಂದು ಹೇಳಿದ್ದಾರೆ.

ರಕ್ಷಣಾ ಶೃಂಗಸಭೆ 2025 ರಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಗಳಲ್ಲಿ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಅತ್ಯಂತ ಪ್ರಮುಖವಾಗಿರಿಸಿಕೊಳ್ಳಬೇಕಾಗುತ್ತದೆ. ಇಂದಿನ ಜಗತ್ತು ವೇಗವಾಗಿ ಬದಲಾಗುತ್ತಿದೆ ಮತ್ತು ಪ್ರತಿದಿನ ಹೊಸ ಸವಾಲುಗಳು ಹೊರಹೊಮ್ಮುತ್ತಿವೆ. ಸಾಂಕ್ರಾಮಿಕ ರೋಗ, ಭಯೋತ್ಪಾದನೆ, ಮತ್ತು ಪ್ರಾದೇಶಿಕ ಸಂಘರ್ಷಗಳಂತಹ ಸವಾಲುಗಳು ಈ ಶತಮಾನವನ್ನು ಅತ್ಯಂತ ಅಸ್ಥಿರಗೊಳಿಸಿವೆ. ಈ ಸವಾಲುಗಳ ನಡುವೆ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪ್ರಮುಖವಾಗಿರಿಸಿಕೊಂಡಿದೆ. ಯಾರನ್ನೂ ಶತ್ರು ಎಂದು ಪರಿಗಣಿಸದಿದ್ದರೂ, ನಮ್ಮ ರೈತರು, ಉದ್ಯಮಿಗಳು ಮತ್ತು ದೇಶದ ಆರ್ಥಿಕತೆಯ ಹಿತಾಸಕ್ತಿಗಳೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೊದಲು ಸ್ವಾವಲಂಬನೆಯನ್ನು ಸವಲತ್ತು ಎಂದು ಭಾವಿಸಲಾಗಿತ್ತು, ಆದರೆ ಇಂದು ಅದು ಅವಶ್ಯಕತೆಯಾಗಿದೆ. ಬಾಹ್ಯ ಅವಲಂಬನೆ ಇನ್ನು ಒಂದು ಆಯ್ಕೆಯಲ್ಲ. 2014 ರಲ್ಲಿ ಭಾರತದ ರಕ್ಷಣಾ ರಫ್ತು ಕೇವಲ ₹700 ಕೋಟಿಯಷ್ಟಿದ್ದರೆ, ಇಂದು ಅದು ₹24,000 ಕೋಟಿಗೆ ಏರಿದೆ ಎಂದು ಉದಾಹರಿಸಿದರು, ಇದು ಭಾರತವು ರಕ್ಷಣಾ ಉತ್ಪಾದಕ ಮತ್ತು ರಫ್ತುದಾರನಾಗಿ ಮುನ್ನಡೆಯುತ್ತಿರುವುದನ್ನು ತೋರಿಸುತ್ತದೆ ಎಂದರು.

ಈ ವೇಳೆ ಭಾರತೀಯ ಸೇನೆಯ ಸಾಮರ್ಥ್ಯವನ್ನು ಕೊಂಡಾಡಿದ ಅವರು, ನಮ್ಮ ಪಡೆಗಳು ಸ್ಥಳೀಯ ಉಪಕರಣಗಳೊಂದಿಗೆ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿವೆ. ಇದಕ್ಕೆ ದೂರದೃಷ್ಟಿ, ದೀರ್ಘ ಸಿದ್ಧತೆ, ಮತ್ತು ಸಮನ್ವಯ ಅಗತ್ಯ. ಆಪರೇಷನ್ ಸಿಂದೂರ್ ಇದು ಕೆಲವೇ ದಿನಗಳ ಯುದ್ಧವಲ್ಲ, ವರ್ಷಗಳ ಕಾರ್ಯತಂತ್ರದ ಸಿದ್ಧತೆ ಮತ್ತು ಸ್ವದೇಶಿ ಉಪಕರಣಗಳ ಶಕ್ತಿಯ ಫಲಿತಾಂಶ. ಒಬ್ಬ ಓಟಗಾರ ಒಂದು ಕ್ಷಣದಲ್ಲಿ ಗೆದ್ದಂತೆ ಕಾಣಬಹುದು, ಆದರೆ ಅದರ ಹಿಂದೆ ವರ್ಷಗಳ ಕಠಿಣ ಪರಿಶ್ರಮವಿರುತ್ತದೆ. ಅದೇ ರೀತಿ, ನಮ್ಮ ಸೇನೆಯ ಯಶಸ್ಸಿನ ಹಿಂದೆ ದೀರ್ಘಕಾಲದ ಸಿದ್ಧತೆಯಿದೆ ಎಂದು ವಿವರಿಸಿದರು.

ಟ್ರಂಪ್‌ ಸುಂಕ ಬೆದರಿಕೆಯು ಭಾರತದ ಆರ್ಥಿಕತೆಗೆ ಸವಾಲು ಒಡ್ಡಿದರೂ, ,ನಾವು ಯಾರೊಂದಿಗೂ ಶತ್ರುತ್ವ ಬಯಸುವುದಿಲ್ಲ, ಆದರೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಯಾವುದೇ ರಾಜಿ ಇಲ್ಲ ಎಂದು ಅವರು ದೃಢವಾಗಿ ಹೇಳಿದ್ದಾರೆ. ಭಾರತವು ಸ್ವಾವಲಂಬನೆ ಮತ್ತು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮೂಲಕ ಜಾಗತಿಕ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ ಎಂಬ ಸಂದೇಶವನ್ನು ರಾಜನಾಥ್ ಸಿಂಗ್ ಸ್ಪಷ್ಟವಾಗಿ ನೀಡಿದ್ದಾರೆ.

ಇದನ್ನೂ ಓದಿ