ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಕ್ಕುಂಡಿಯ ಮನೆಯೊಂದರಲ್ಲಿ ಪಾಯ ತೆಗೆಯುವ ವೇಳೆ ಚಿನ್ನ ಸಿಕ್ಕಿದ್ದು, ಈ ಬಗ್ಗೆ ರಾಜ್ಯಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಚಿನ್ನ ಸಿಕ್ಕಾಗ ಜಿಲ್ಲಾಡಳಿತಕ್ಕೆ ನೀಡಿದ ಕುಟುಂಬ ಇದೀಗ ಅದು ನಮ್ಮ ಹಿರಿಯರದು ನಮಗೆ ವಾಪಾಸ್ ನೀಡಿ ಎಂದು ಹೇಳಿತ್ತು. ಆದರೆ ಅವರಿಗೆ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ.
ಇದೀಗ ಕುಟುಂಬದವರು ನಮಗೆ ಚಿನ್ನದ ಮೇಲೆ ಆಸೆ ಇಲ್ಲ, ಶ್ರೀಮಂತರಾಗಬೇಕು ಎನ್ನುವ ಬಯಕೆ ಇಲ್ಲ. ಬಡತನದಲ್ಲಿ ಇದ್ದೀವಿ ಸಹಾಯ ಬೇಕು ಎಂದಿದ್ದಾರೆ. ನಿಧಿ ಪತ್ತೆಯಾದ ಸ್ಥಳದ ಮಾಲೀಕರಾಗಿರುವ ಮಹಿಳೆಯ ಸಹೋದರ ಗುಡದಪ್ಪ ಮಾತನಾಡಿ, ತಂಗಿ ಗಂಡನನ್ನು ಕಳೆದುಕೊಂಡು ಮನೆಯಿಲ್ಲದೆ ತಮ್ಮೊಂದಿಗೆ ವಾಸಿಸುತ್ತಿದ್ದಾಳೆ. ಕುಟುಂಬಕ್ಕೆ ವಾಸಿಸಲು ಸ್ವಂತ ಮನೆ ಇಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾಳೆ ಎಂದರು.
ಗುಡದಪ್ಪ ಪ್ರಕಾರ, ನಿಧಿ ಹಸ್ತಾಂತರ ಮಾಡಿದ ಬಳಿಕವೂ ಅಧಿಕಾರಿಗಳಿಂದ ಯಾವುದೇ ಸ್ಪಷ್ಟವಾದ ಭರವಸೆ ಸಿಕ್ಕಿಲ್ಲ. ಅಧಿಕಾರಿಗಳು ಭೇಟಿ ನೀಡಿದ್ದರೂ ನಂತರ ಹಿರಿಯ ಅಧಿಕಾರಿಗಳು ಅವರ ಕಡೆಗೆ ತಿರುಗಿಯೂ ನೋಡಿಲ್ಲ. ಆರ್ಥಿಕವಾಗಿ ದುರ್ಬಲವಾಗಿರುವ ಆ ಕುಟುಂಬಕ್ಕೆ ಚಿನ್ನದ ಆಸೆ ಇಲ್ಲ. ತಂಗಿ ಮತ್ತು ಅವರ ಮಗನಿಗೆ ಒಂದು ಮನೆ ಮತ್ತು ನಿವೇಶನ ದೊರಕಿಸಿಕೊಡಬೇಕೆಂದು ಸರ್ಕಾರಕ್ಕೆ ಗುಡದಪ್ಪ ಮನವಿ ಮಾಡಿದ್ದಾರೆ.

