ಹೊಸದಿಗಂತ ವರದಿ ಹುಬ್ಬಳ್ಳಿ:
ಸರ್ಕಾರ ಸೂಕ್ತ ಸಮಯದಲ್ಲಿ ಬೆಂಬಲ ಬೆಲೆಯ ಖರೀದಿ ಕೇಂದ್ರ ಸ್ಥಾಪಿಸಿ ನೋಂದಣಿ ಪ್ರಕ್ರಿಯೆ ಆರಂಭಿಸದ ಕಾರಣ ರೈತ ಸೇನಾ ಕರ್ನಾಟಕ ಬೆಂಗಳೂರಿನ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ ಎಂದು ರಾಜ್ಯ ವಕ್ತಾರ ಗುರು ರಾಯನಗೌಡರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಯಂ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ 2021 ರಲ್ಲಿ ಬೆಂಗಳೂರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಕುಲಂಕುಷವಾಗಿ ಪರಿಶೀಲಿಸಿದ ನ್ಯಾಯಾಲಯ ೨೦೨೫ ಮೇ ೨೮ ರಂದು ರಾಜ್ಯದ ಜಿಲ್ಲಾ ಹಾಗೂ ಹೋಬಳಿ ಮಟ್ಟದಲ್ಲಿ ರೈತರ ಬೆಳೆಗಳು ಕಟಾವಿಗೆ ಬರುವ ಒಂದು ತಿಂಗಳ ಮುಂಚೆ ನೋಂದಣಿ ಪ್ರಕ್ರಿಯೆ ಆರಂಭಿಸಿ ಖರೀದಿ ಮಾಡಬೇಕು ಎಂದು ಆದೇಶ ನೀಡಿದೆ ಎಂದರು.
ಸರ್ಕಾರ ಹಾಗೂ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಿಲ್ಲ. ಮುಂಗಾರು ಬೆಳೆಯಾದ ಹೆಸರು ಹಾಗೂ ಗೋವಿನ ಜೋಳ ಬಂದ ಸಮಯದಲ್ಲಿ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭಿಸಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ಮಾಡುತ್ತಿದ್ದಾರೆ. ಬೆಳೆ ಬಂದು ಇಷ್ಟು ದಿನವಾದರೂ ರೈತರ ಬೆಳೆ ಖರೀದಿ ಪ್ರಕ್ರಿಯೆ ಈಗ ನಡೆದಿದೆ. ಇದರಿಂದ ರೈತರು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಈಗ ಹಿಂಗಾರ ಬೆಳೆಯಾದ ಕಡಲೆ ಬೆಳೆ ಕಟಾವಿಗೆ ಬಂದಿದ್ದು, ಅಧಿಕಾರಿಗಳು ನೋಂದಣಿ ಪ್ರಕ್ರಿಯೆ ಆರಂಭಿಸಿಲ್ಲ. ಆದ್ದರಿಂದ ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಆದೇಶ ಉಲ್ಲಂಸಿದ ಹಿನ್ನೆಲೆ ರೈತ ಸೇನಾ ಕರ್ನಾಟಕ ನ್ಯಾಯಾಲಯದ ಮೊರೆ ಹೋಗಿದೆ. ಶಾಸಕಾಂಗ ಹಾಗೂ ಕಾರ್ಯಾಂಗದ ಮೇಲೆ ವಿಶ್ವಾಸವಿಲ್ಲವಾಗಿದ್ದು, ನ್ಯಾಯಾಂಗದಿಂದ ರೈತರ ಸಮಸ್ಯೆಪರಿಹಾರ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.


