ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನಲ್ಲಿ ನಡೆದ ‘ಗ್ಲೋಬಲ್ ಪೀಸ್ ಆನರ್ಸ್ 2025’ ಕಾರ್ಯಕ್ರಮದಲ್ಲಿ ನಟ ಶಾರುಖ್ ಖಾನ್ ಮನಮುಟ್ಟುವ ಭಾಷಣ ಮಾಡಿ ಪ್ರೇಕ್ಷಕರ ಕಡೆಯಿಂದ ಭಾರಿ ಮೆಚ್ಚುಗೆ ಪಡೆದಿದ್ದಾರೆ. ನವೆಂಬರ್ 22ರಂದು ನಡೆದ ಈ ಕಾರ್ಯಕ್ರಮದಲ್ಲಿ ದೇಶದ ನಿದ್ದೆಗೆಡಿಸಿದ್ದ ಭಯೋತ್ಪಾದಕ ದಾಳಿಗಳನ್ನು ಸ್ಮರಿಸಿ, ಅವುಗಳಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಹಾಗೂ ಹುತಾತ್ಮ ಭದ್ರತಾ ಸಿಬ್ಬಂದಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು.
26/11 ದಾಳಿ, ಪಹಲ್ಗಾಮ್ ದಾಳಿ ಮತ್ತು ಇತ್ತೀಚಿನ ದೆಹಲಿ ಸ್ಫೋಟವನ್ನು ಉಲ್ಲೇಖಿಸಿದ ಶಾರುಖ್, ದೇಶರಕ್ಷಣೆಗಾಗಿ ತನ್ನ ಪ್ರಾಣವನ್ನೇ ಅರ್ಪಿಸುವ ಸೈನಿಕರ ಬಗ್ಗೆ ಗೌರವದಿಂದ ಮಾತನಾಡಿದರು. ಸೈನಿಕರ ಸೇವೆಯನ್ನು ಹೆಮ್ಮೆಪಡಬೇಕು ಮತ್ತು ಅವರ ಧೈರ್ಯವೇ ದೇಶದ ನಿಜವಾದ ಬಲ ಎಂದು ಅವರು ಹೇಳಿದರು. ಸೈನಿಕರಿಗಾಗಿ ವಿಶೇಷವಾಗಿ ಬರೆಯಲಾದ ನಾಲ್ಕು ಸಾಲುಗಳನ್ನು ಹಂಚಿಕೊಂಡ ಶಾರುಖ್, “ನಮ್ಮ ಮೇಲೆ ದಾಳಿ ಮಾಡಲು ಬರುವವರಿಗೇ ಭಯವಾಗಬೇಕು,” ಎಂದು ಭಾವಪೂರ್ಣವಾಗಿ ಹೇಳಿದರು.
ಮಾನವೀಯತೆ, ಏಕತೆ ಮತ್ತು ಶಾಂತಿ ನಮ್ಮ ದೇಶದ ನಿಜವಾದ ಆಸ್ತಿಯಾಗಿದೆ ಎಂದು ಅವರು ಮನದಟ್ಟು ಮಾಡುತ್ತಾ, “ನಾವು ಒಗ್ಗಟ್ಟಾಗಿದ್ದರೆ ಭಾರತವನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ,” ಎಂದು ಒತ್ತಿ ಹೇಳಿದರು. ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ.

