January19, 2026
Monday, January 19, 2026
spot_img

ಹಾಕಿ ವಿಶ್ವಕಪ್‌ಗಾಗಿ ನಾವು ಭಾರತಕ್ಕೆ ಬರುತ್ತೇವೆ: ಪಾಕಿಸ್ತಾನ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಬಿರುಕು ಮೂಡಿದ್ದು, ಹೀಗಾಗಿ ಉಭಯ ದೇಶಗಳು ವ್ಯವಹಾರದಲ್ಲಿ ಮಾತ್ರವಲ್ಲದೆ ಕ್ರೀಡೆಯ ವಿಚಾರದಲ್ಲೂ ಅಂತರ ಕಾಯ್ದುಕೊಂಡಿವೆ.

ಕೆಲವೇ ದಿನಗಳ ಹಿಂದೆ ಭಾರತ ಸರ್ಕಾರ ಕೂಡ ಪಾಕಿಸ್ತಾನ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡು ಪಾಕಿಸ್ತಾನದ ಜೊತೆಗೆ ಯಾವುದೇ ದ್ವಿಪಕ್ಷಿಯ ಪಂದ್ಯಗಳನ್ನಾಗಲಿ ಅಥವಾ ಕ್ರೀಡೆಗಳನ್ನಾಗಲಿ ಆಡುವುದಿಲ್ಲ ಎಂದಿತ್ತು. ಇದರ ಪರಿಣಾಮವಾಗಿ ಇತ್ತೀಚೆಗೆ ಪಾಕಿಸ್ತಾನ ಹಾಕಿ ತಂಡ, ಹಾಕಿ ಏಷ್ಯಾಕಪ್‌ಗಾಗಿ ಭಾರತಕ್ಕೆ ಬರದಿರಲು ನಿರ್ಧರಿಸಿತ್ತು. ಆದರೀಗ ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್​ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಈ ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡ ಭಾರತಕ್ಕೆ ಬರುತ್ತಿದೆ.

ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವುದನ್ನು ದೃಢಪಡಿಸಿದೆ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಘೋಷಿಸಿದ್ದಾರೆ. ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್ ಹಾಕಿ ಜಗತ್ತಿನಲ್ಲಿ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, ಇದರಲ್ಲಿ ಪ್ರಪಂಚದಾದ್ಯಂತದ 21 ವರ್ಷದೊಳಗಿನ ತಂಡಗಳು ಭಾಗವಹಿಸುತ್ತವೆ.

2025 ರ ಎಫ್‌ಐಎಚ್ ಜೂನಿಯರ್ ಹಾಕಿ ವಿಶ್ವಕಪ್ ಈ ವರ್ಷ ನವೆಂಬರ್ 28 ರಿಂದ ಡಿಸೆಂಬರ್ 10 ರವರೆಗೆ ಚೆನ್ನೈ ಮತ್ತು ಮಧುರೈನಲ್ಲಿ ನಡೆಯಲಿದ್ದು, ಇದರಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿವೆ. ಭಾರತವು ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ, ಚಿಲಿ ಮತ್ತು ಸ್ವಿಟ್ಜರ್ಲೆಂಡ್ ಜೊತೆಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

2025 ರ ಹಾಕಿ ಏಷ್ಯಾಕಪ್ ಪ್ರಸ್ತುತ ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿದೆ. ಆದರೆ ಪಾಕಿಸ್ತಾನ ತಂಡ ಈ ಪಂದ್ಯಾವಳಿಯ ಭಾಗವಾಗಿಲ್ಲ. ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತಕ್ಕೆ ತಂಡವನ್ನು ಕಳುಹಿಸುವುದು ಕಷ್ಟ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್ ಈಗಾಗಲೇ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್) ಮತ್ತು ಎಎಚ್‌ಎಫ್ ಎರಡಕ್ಕೂ ತಿಳಿಸಿತ್ತು. ಇದರ ನಂತರ, ಪಾಕಿಸ್ತಾನ ತಂಡವು ಪಂದ್ಯಾವಳಿಯಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡಿತು. ಆದರೆ ಪಾಕಿಸ್ತಾನ ಹಾಕಿ ಫೆಡರೇಶನ್ ಎಫ್‌ಐಹೆಚ್ ಜೂನಿಯರ್ ಹಾಕಿ ವಿಶ್ವಕಪ್‌ಗೆ ತಂಡವನ್ನು ಕಳುಹಿಸಲು ನಿರ್ಧರಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

Must Read