ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ವಿಮಾನ ಸೇವೆಗಳ ವ್ಯತ್ಯಯದಿಂದಾಗಿ ಇಂಡಿಗೋ ಏರ್‌ಲೈನ್ಸ್ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ವಿಳಂಬ, ರದ್ದು ಮತ್ತು ಸಾಮಾನು ಸಿಗದ ಸಮಸ್ಯೆಗಳನ್ನು ಎದುರಿಸಿದ ನಡುವೆಯೇ, ಇಂಡಿಗೋ ವಿಮಾನದ ಪೈಲಟ್ ಒಬ್ಬರು ಕೈಗೊಂಡ ಮಾನವೀಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ಇಂಡಿಗೋ ಪೈಲಟ್ ಪ್ರದೀಪ್ ಕೃಷ್ಣನ್ ಅವರು ವಿಮಾನದಲ್ಲಿದ್ದ ಪ್ರಯಾಣಿಕರೊಂದಿಗೆ ಮಾತನಾಡಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅವರು ಪ್ರಯಾಣಿಕರಿಗೆ ನೇರವಾಗಿ ಕ್ಷಮೆ ಕೋರಿದ್ದು, ಉಂಟಾದ ತೊಂದರೆಗಳಿಗೆ ಸಹಾನುಭೂತಿ ಸೂಚಿಸಿದ್ದಾರೆ. ವಿಮಾನ ಸಂಚಾರದಲ್ಲಿ ಎದುರಾದ ಅಡಚಣೆಗಳ ನಡುವೆಯೂ ತಾಳ್ಮೆಯಿಂದ ವರ್ತಿಸಿದ ಪ್ರಯಾಣಿಕರಿಗೆ ಧನ್ಯವಾದ ಸಲ್ಲಿಸಿದ ಅವರು, “ನಿಮ್ಮ ಪರಿಸ್ಥಿತಿ ನಮಗೂ ಅರ್ಥವಾಗುತ್ತದೆ. ನಿಮ್ಮನ್ನು ನಿಮ್ಮ ಊರಿಗೆ ಸುರಕ್ಷಿತವಾಗಿ ತಲುಪಿಸುವುದು ನಮ್ಮ ಜವಾಬ್ದಾರಿ” ಎಂದು ಭರವಸೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಂಸ್ಥೆ ಹಲವು ಕಾರ್ಯಾಚರಣಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದಕ್ಕೆ ಯಾವುದೇ ಮುಷ್ಕರವೂ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ ಪೈಲಟ್, ಸಿಬ್ಬಂದಿಗೂ ಈ ಸ್ಥಿತಿ ನೋವಿನ ಸಂಗತಿಯೇ ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಿಂದ ತಂಡ ನಿಧಾನವಾಗಿ ಹೊರಬರುತ್ತಿದೆ ಎಂಬ ಆಶಾವಾದವನ್ನೂ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಪೈಲಟ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಠಿಣ ಸಮಯದಲ್ಲಿ ತಾಳ್ಮೆ ಮತ್ತು ಗೌರವವೇ ದೊಡ್ಡ ಗುಣ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

