ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪು ಕೋಟೆ ಸಮೀಪ ಸಂಭವಿಸಿದ ಭೀಕರ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ ಬೆನ್ನಲ್ಲೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಭದ್ರತಾ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಎರಡು ದಿನಗಳ ಭೂತಾನ್ ಪ್ರವಾಸ ಮುಗಿಸಿ ತವರಿಗೆ ಮರಳಿದ ಕೂಡಲೇ ಪ್ರಧಾನಿಯವರು ಇಂದು ಸಂಜೆ ತಮ್ಮ ನಿವಾಸದಲ್ಲಿ ಸಭೆ ಕರೆದಿದ್ದರು.
ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡು ಪ್ರಮುಖ ಬೆಳವಣಿಗೆಗಳ ಕುರಿತು ಪ್ರಧಾನಿಗೆ ಮಾಹಿತಿ ನೀಡಿದರು.
ಗಾಯಾಳುಗಳ ಭೇಟಿ, ಪ್ರಧಾನಿ ಆಕ್ರೋಶ
ಸಭೆಗೂ ಮುನ್ನ ಪ್ರಧಾನಿ ಮೋದಿ ಅವರು ಎಲ್‌ಎನ್‌ಜೆಪಿ ಆಸ್ಪತ್ರೆಗೆ ಭೇಟಿ ನೀಡಿ ಸ್ಫೋಟದಲ್ಲಿ ಗಾಯಗೊಂಡಿದ್ದವರ ಆರೋಗ್ಯ ವಿಚಾರಿಸಿದರು. ನಂತರ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ, ಗಾಯಾಳುಗಳು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದರು. “ಈ ಪಿತೂರಿಯ ಹಿಂದಿರುವವರನ್ನು ಖಂಡಿತವಾಗಿಯೂ ನ್ಯಾಯದ ಕಟಕಟೆಗೆ ತರಲಾಗುವುದು” ಎಂದು ಅವರು ಕಠಿಣ ಎಚ್ಚರಿಕೆ ನೀಡಿದರು.
ಭಯೋತ್ಪಾದಕ ಸಂಚು ಶಂಕೆ, ತನಿಖೆ NIAಗೆ
ಸೋಮವಾರ ಸಂಜೆ ಲಾಲ್ ಕ್ವಿಲಾ ಮೆಟ್ರೋ ನಿಲ್ದಾಣದ ಬಳಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಈ ಸ್ಫೋಟ ಸಂಭವಿಸಿದ್ದು, ಇದು ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. ಮೃತರ ಜೊತೆಗೆ ಅನೇಕರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯಲ್ಲಿ ಭಯೋತ್ಪಾದಕ ಸಂಚಿನ ಪುರಾವೆಗಳು ಲಭ್ಯವಾದ ಹಿನ್ನೆಲೆಯಲ್ಲಿ, ಗೃಹ ಸಚಿವಾಲಯವು ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಜೈಶ್-ಎ-ಮೊಹಮ್ಮದ್ ಬೆಂಬಲಿತ ಮಾಡ್ಯೂಲ್ ಇದರ ಹಿಂದೆ ಇರುವ ಸಾಧ್ಯತೆ ಇದೆ. ಈ ಗುಂಪು 2008ರ 26/11 ಮುಂಬೈ ಭಯೋತ್ಪಾದಕ ದಾಳಿಯಿಂದ ಪ್ರೇರಿತವಾಗಿದ್ದು, ದೆಹಲಿ, ಗುರುಗ್ರಾಮ್ ಮತ್ತು ಫರಿದಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿತ್ತು ಎಂದು ತಿಳಿದುಬಂದಿದೆ.

