April 10, 2026
Friday, April 10, 2026
spot_img

WEATHER | ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ: 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮೋಡ ಕವಿದ ವಾತಾವರಣ ಕಂಡುಬರುತ್ತಿದ್ದು, ಕೆಲವು ಕಡೆಗಳಲ್ಲಿ ಸಣ್ಣ ಪ್ರಮಾಣದ ಮಳೆಯು ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಸುಮಾರು 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯ ಸಂಭವವಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆಯು ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಬೆಳ್ತಂಗಡಿ, ಸುಳ್ಯ, ಕುಂದಾಪುರ ಹಾಗೂ ಕಾರ್ಕಳ ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚು ಇರಬಹುದು ಎಂದು ವರದಿ ತಿಳಿಸಿದೆ.

ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ರಾಮನಗರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಕೊಡಗು ಹಾಗೂ ತುಮಕೂರು ಭಾಗಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ಬೀದರ್, ಬೆಳಗಾವಿ, ಗದಗ, ಧಾರವಾಡ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಗಂಟೆಗೆ 14ರಿಂದ 20 ಕಿಲೋಮೀಟರ್ ಇರಬಹುದೆಂದು ಅಂದಾಜಿಸಲಾಗಿದೆ. ನಗರದ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !