Wednesday, December 10, 2025

ಹವಾಮಾನದ ಹೊಡೆತ: ಟೊಮೆಟೊ ದರ ಗಗನಕ್ಕೆ, ಮಾರುಕಟ್ಟೆಯಿಂದಲೇ ನುಗ್ಗೇಕಾಯಿ ನಾಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹವಾಮಾನ ವೈಪರೀತ್ಯವು ದೇಶದ ತರಕಾರಿ ಬೆಳೆಗಳ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಸದ್ಯ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆಗಳು ಗಗನಕ್ಕೆ ಏರಿವೆ. ಪ್ರಮುಖವಾಗಿ ಟೊಮ್ಯಾಟೋ ಮತ್ತು ನುಗ್ಗೇಕಾಯಿ ಪೂರೈಕೆಯಲ್ಲಿ ಭಾರಿ ಅಭಾವ ಎದುರಾಗಿದೆ. ಬೇಡಿಕೆ ಹೆಚ್ಚುತ್ತಿದ್ದರೆ, ಮಳೆಯ ಅಬ್ಬರದಿಂದಾಗಿ ಪೂರೈಕೆ ಸಂಪೂರ್ಣ ಕುಗ್ಗಿದೆ.

ಏಷ್ಯಾದ ಅತಿದೊಡ್ಡ ಟೊಮ್ಯಾಟೋ ಮಾರುಕಟ್ಟೆ ಎಂದು ಖ್ಯಾತಿ ಪಡೆದಿರುವ ಕೋಲಾರ ಎಪಿಎಂಸಿ ಮಾರ್ಕೆಟ್‌ನಲ್ಲಿಯೇ ಟೊಮ್ಯಾಟೋಗೆ ಹಾಹಾಕಾರ ಶುರುವಾಗಿದೆ.

ಇತ್ತೀಚಿನ ದಿನಗಳಲ್ಲಿ 150-200ಕ್ಕೆ ಮಾರಾಟವಾಗುತ್ತಿದ್ದ 15 ಕೆಜಿ ತೂಕದ ಒಂದು ಬಾಕ್ಸ್ ಟೊಮ್ಯಾಟೋ ಸದ್ಯ 600 ರಿಂದ 800 ರವರೆಗೆ ಮಾರಾಟವಾಗುತ್ತಿದೆ. ಇದು ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಹಾಕಿದೆ.

ಟೊಮ್ಯಾಟೋ ಪ್ರಮುಖವಾಗಿ ಬೆಳೆಯುವ ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿದೆ.

ಈ ಕಷ್ಟದ ಸಮಯದಲ್ಲಿ ಕೋಲಾರ ಮಾರುಕಟ್ಟೆಗೆ ಆಂಧ್ರ ಪ್ರದೇಶ, ತಮಿಳುನಾಡು ಗಡಿಭಾಗಗಳಿಂದ ಹಾಗೂ ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಮಡಿಕೇರಿ, ಮಂಡ್ಯ ಮತ್ತು ಚಾಮರಾಜನಗರದಂತಹ ಹೊರ ಜಿಲ್ಲೆಗಳಿಂದ ಟೊಮ್ಯಾಟೋ ಸರಬರಾಜಾಗುತ್ತಿದೆ.

ಟೊಮ್ಯಾಟೋದಷ್ಟೇ ನುಗ್ಗೇಕಾಯಿಯ ಪರಿಸ್ಥಿತಿಯೂ ಶೋಚನೀಯವಾಗಿದೆ. ನುಗ್ಗೇಕಾಯಿ ಹೆಚ್ಚಾಗಿ ಬೆಳೆಯುವ ತಮಿಳುನಾಡಿನಲ್ಲಿ ವರುಣನ ಅಬ್ಬರ ಮತ್ತು ಚಂಡಮಾರುತದಿಂದಾಗಿ ಬೆಳೆ ನೆಲಕಚ್ಚಿದೆ.

ನಿರೀಕ್ಷಿತ ಮಟ್ಟದ ನುಗ್ಗೇಕಾಯಿ ಮಾರುಕಟ್ಟೆಗೆ ಬಾರದ ಕಾರಣ ಇದರ ಬೇಡಿಕೆಯೂ ಹೆಚ್ಚಿದೆ. ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದ್ದರೂ, ಮಾರುಕಟ್ಟೆಯಲ್ಲಿ ನುಗ್ಗೇಕಾಯಿ ಸಿಗೋದೆ ಕಷ್ಟ ಎಂಬ ಸ್ಥಿತಿ ಉಂಟಾಗಿದೆ.

error: Content is protected !!