February 26, 2026
Thursday, February 26, 2026
spot_img

ಬುಧವಾರ, ಗುರುವಾರದ ಕಲಾಪ ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತ: ಬಸವರಾಜ ಹೊರಟ್ಟಿ

ಹೊಸದಿಗಂತ ವರದಿ ಬೆಳಗಾವಿ:

157ನೇ ಅಧಿವೇಶನದಲ್ಲಿ ಪ್ರತಿ ಬುಧವಾರ ಮತ್ತು ಗುರುವಾರ ಪೂರ್ತಿ ದಿನದ ಕಲಾಪವನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು.

ಸುವರ್ಣಸೌಧದ ಕೊಠಡಿ ಸಂಖ್ಯೆ 238ರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ 145ನೇ ಅಧಿವೇಶನದಲ್ಲಿ 6 ಗಂಟೆ 35 ನಿಮಿಷ ಚರ್ಚೆಯಾಗಿದ್ದು, 19 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ.

151ನೇ ಅಧಿವೇಶನದಲ್ಲಿ 1 ಗಂಟೆ 40 ನಿಮಿಷ ಚರ್ಚೆಯಾಗಿದ್ದು, 6 ಜನ ಪರಿಷತ್ ಸದಸ್ಯರು ಮಾತನಾಡಿದ್ದಾರೆ. 154ನೇ ಅಧಿವೇಶನದಲ್ಲಿ 5 ಗಂಟೆ 12 ನಿಮಿಷ ಚರ್ಚೆಯಾಗಿದ್ದು, 11 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ. ಅದರಂತೆ ಈ ಬಾರಿಯ ಅಧಿವೇಶನದಲ್ಲೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು.

ಪ್ರತಿ ಬುಧವಾರ ಮತ್ತು ಗುರುವಾರ ನಡೆಯುವ ಇಡೀ ದಿನದ ಕಲಾಪದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಇದ್ಯಾವುದಕ್ಕೂ ಅವಕಾಶ ನೀಡದೇ ಕೃಷ್ಣಮೇಲ್ದಂಡೆ ಯೋಜನೆ, ಮಹಾದಾಯಿ, ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನದ ಬಗ್ಗೆ, ಅರಣ್ಯ ಭೂಮಿ ಅತಿಕ್ರಮಣ, ಉತ್ತರ ಕರ್ನಾಟಕ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರಗಳು, ಉದ್ಯೋಗ ಸೃಷ್ಠಿಗೆ ಕ್ರಿಯಾಯೋಜನೆ ವಿಷಯಗಳ ಮೇಲೆ ಚರ್ಚೆಗೆ ಅವಕಾಶ ನೀಡಲಾಗುವುದು.

ಪ್ರಸಕ್ತ ಅಧಿವೇಶನಕ್ಕೆ ಒಟ್ಟು 1649 ಪ್ರಶ್ನೆಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 965 ಚುಕ್ಕೆ ಗುರುತಿನ ಹಾಗೂ 684 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ. ನಿಯಮ 72ರಡಿ 112 ಸೂಚನೆಗಳನ್ನು ಸ್ವೀಕರಿಸಲಾಗಿದೆ. ನಿಯಮ 330 ರಡಿ 84 ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಕಾರ್ಯದರ್ಶಿಗಳಾದ ಕೆ.ಆರ್. ಮಹಾಲಕ್ಷ್ಮಿ, ನಿರ್ಮಲಾ ಎಸ್ ಹಾಗೂ ಸಚಿವಾಲಯದ ಅಧಿಕಾರಿಗಳು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !