January19, 2026
Monday, January 19, 2026
spot_img

weight loss | ತೂಕ ಇಳಿಸೋಕೆ ಪರದಾಡ್ತಿದ್ದೀರಾ? ಹಾಗಿದ್ರೆ ಈ ಸಿಂಪಲ್ 21-21-21 ನಿಯಮ ಫಾಲೋ ಮಾಡಿ!

ತೂಕ ಇಳಿಸಲು ಹಲವಾರು ವಿಧಾನಗಳನ್ನು ಜನರು ಪ್ರಯತ್ನಿಸುತ್ತಾರೆ. ಕೆಲವರಿಗೆ ಡಯಟ್‌ ಕೆಲಸ ಮಾಡುತ್ತದೆ, ಕೆಲವರಿಗೆ ವ್ಯಾಯಾಮ. ಆದರೆ ನಿಯಮಿತ ಅಭ್ಯಾಸವಿಲ್ಲದೆ ತೂಕ ಇಳಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಇತ್ತೀಚೆಗೆ “21-21-21 ರೂಲ್” ಎಂದು ಕರೆಯಲಾಗುವ ಸರಳ ಆದರೆ ಪರಿಣಾಮಕಾರಿ ನಿಯಮವು ತೂಕ ಇಳಿಕೆಗೆ ಸಹಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.

21-21-21 ನಿಯಮ ಏನು?

ಈ ನಿಯಮದ ಅರ್ಥ, ಯಾವುದೇ ಆರೋಗ್ಯಕರ ಅಭ್ಯಾಸವನ್ನು ಕನಿಷ್ಠ 21 ದಿನಗಳ ಕಾಲ ನಿರಂತರವಾಗಿ ಮಾಡಬೇಕು. ಒಂದು ಬಾರಿ ಅದನ್ನು 21 ದಿನ ಪಾಲಿಸಿದರೆ ಅದು ಒಂದು ಶಿಸ್ತಿನ ಅಭ್ಯಾಸವಾಗುತ್ತದೆ. ನಂತರ ಆ ಅಭ್ಯಾಸವನ್ನು ಮುಂದಿನ 21 ವಾರಗಳ ಕಾಲ ಮುಂದುವರಿಸಿದರೆ ಅದು ದೀರ್ಘಕಾಲೀನ ಜೀವನಶೈಲಿಯ ಭಾಗವಾಗುತ್ತದೆ. ಇದರಿಂದ ತೂಕ ಇಳಿಕೆಯ ಜೊತೆಗೆ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

ಮೊದಲ 21 ದಿನಗಳು
ಈ ಹಂತದಲ್ಲಿ ಯಾವುದೇ ಭಾರಿ ವ್ಯಾಯಾಮ ಮಾಡುವ ಅಗತ್ಯವಿಲ್ಲ. ಪ್ರತಿದಿನ ಕೇವಲ 20 ರಿಂದ 25 ನಿಮಿಷಗಳ ಕಾಲ ಲಘು ದೈಹಿಕ ಚಟುವಟಿಕೆ ಮಾಡುವುದು ಸಾಕು. ಶಾಲೆಯ ಪಿಟಿ ಅವಧಿಯಂತೆಯೇ ಸ್ಟ್ರೆಚಿಂಗ್ ವ್ಯಾಯಾಮ, ಓಟ, ಲಘು ನಡಿಗೆ, ಯೋಗವನ್ನು ಮಾಡಬಹುದು. ಈ ಅವಧಿಯಲ್ಲಿ ಆಹಾರ ಕ್ರಮದಲ್ಲಿ ಹೆಚ್ಚಿನ ಬದಲಾವಣೆ ಅಗತ್ಯವಿಲ್ಲ. ಮುಖ್ಯ ಗುರಿ ದೇಹವನ್ನು ಚಟುವಟಿಕೆಗೆ ಅಳವಡಿಸಿಕೊಳ್ಳುವುದು.

ಮುಂದಿನ 21 ದಿನಗಳು
ಎರಡನೇ ಹಂತ ಅತ್ಯಂತ ಮುಖ್ಯ. ಈ ಅವಧಿಯಲ್ಲಿ ನಿಧಾನವಾಗಿ ಆಹಾರ ಕ್ರಮದತ್ತ ಗಮನ ಹರಿಸಬೇಕು. ಕಾರ್ಬೋಹೈಡ್ರೇಟ್‌ಗಳನ್ನು ಸಂಪೂರ್ಣ ತ್ಯಜಿಸುವ ಅಗತ್ಯವಿಲ್ಲ, ಆದರೆ ಹೊರಗಿನ ಆಹಾರವನ್ನು ಕಡಿಮೆ ಮಾಡಬೇಕು. ಹುರಿದ ತಿನಿಸುಗಳು, ಜಂಕ್ ಫುಡ್, ಫಾಸ್ಟ್ ಫುಡ್ ಸೇವನೆಯನ್ನು ನಿಲ್ಲಿಸಿ ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಬೇಕು. ಸಕ್ಕರೆ ಹಾಗೂ ಸಿಹಿತಿಂಡಿಗಳನ್ನು ತ್ಯಜಿಸಿ, ಹಣ್ಣುಗಳು, ತಾಜಾ ತರಕಾರಿಗಳು ಮತ್ತು ನಟ್ಸ್‌ಗಳನ್ನು ಆಹಾರದಲ್ಲಿ ಸೇರಿಸುವುದು ಅಗತ್ಯ.

ಅಂತಿಮ 21 ದಿನಗಳು
ಕೊನೆಯ ಹಂತ ತೂಕ ಇಳಿಕೆಯಲ್ಲಿ ನಿರ್ಣಾಯಕ. ಈ ಸಮಯದಲ್ಲಿ ದೇಹಕ್ಕೆ ಹಾನಿಕಾರಕ ಅಭ್ಯಾಸಗಳನ್ನು ಸಂಪೂರ್ಣವಾಗಿ ತ್ಯಜಿಸಲು ಕಟ್ಟುಪಾಡು ಅಗತ್ಯ. ಮದ್ಯಪಾನ, ಧೂಮಪಾನ, ಅತಿಯಾದ ಕೆಫೀನ್ ಹಾಗೂ ಸಿಹಿತಿಂಡಿಗಳ ಸೇವನೆಯ ಮೇಲೆ ಸಂಪೂರ್ಣ ನಿಗ್ರಹ ಸಾಧಿಸಬೇಕು. ಈ ಹಂತದಲ್ಲಿ ಗುರಿಯು ಸ್ಪಷ್ಟವಾಗಿರಬೇಕು ಮತ್ತು ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಲು ಮಾನಸಿಕವಾಗಿ ಬಲವಾಗಿರಬೇಕು.

ತೂಕ ಇಳಿಸಲು ಶೀಘ್ರ ಪರಿಹಾರಗಳಿಗಿಂತ ದೀರ್ಘಕಾಲೀನ ಅಭ್ಯಾಸಗಳು ಹೆಚ್ಚು ಪರಿಣಾಮಕಾರಿ. 21-21-21 ನಿಯಮವು ಅತೀ ಸರಳವಾಗಿದ್ದು, ಪ್ರತಿಯೊಬ್ಬರೂ ಅನುಸರಿಸಬಹುದಾದ ವಿಧಾನ. ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಜೀವನ ಶೈಲಿಯನ್ನು ಈ ನಿಯಮದಡಿ ಪಾಲಿಸಿದರೆ ತೂಕ ಇಳಿಕೆ ಮಾತ್ರವಲ್ಲದೆ, ದೇಹ ಮತ್ತು ಮನಸ್ಸು ಎರಡೂ ಸಮತೋಲನದಲ್ಲಿರುತ್ತವೆ.

Must Read

error: Content is protected !!