ಇಂದಿನ ಜೀವನಶೈಲಿಯಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ (Obesity) ಅನೇಕ ಆರೋಗ್ಯ ಸಮಸ್ಯೆಗಳ ಮೂಲವಾಗಿದೆ. ತೂಕ ಇಳಿಸಲು ಹಲವು ಜನರು ಡಯಟ್, ಜಿಮ್ ಹಾಗೂ ಯೋಗವನ್ನು ಅನುಸರಿಸುತ್ತಿದ್ದಾರೆ. ಆದರೆ, ನಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಮೊಸರು ಕೂಡ ತೂಕ ಇಳಿಕೆಗೆ ಮಹತ್ತರ ಪಾತ್ರವಹಿಸಬಹುದು ಎಂದು ತಜ್ಞರು ಹೇಳುತ್ತಾರೆ. ಮೊಸರು ಕೇವಲ ತಂಪು ನೀಡುವ ಪಾನೀಯವಷ್ಟೇ ಅಲ್ಲ, ಇದು ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಪ್ರೋಬಯಾಟಿಕ್‌ಗಳ ಶ್ರೇಷ್ಠ ಮೂಲ.

ತೂಕ ಇಳಿಕೆಗೆ ಮೊಸರು ಹೇಗೆ ಸಹಾಯ ಮಾಡುತ್ತದೆ?
ಕೊಬ್ಬು ಕರಗಿಸುವ ಶಕ್ತಿ – ಮೊಸರಿನಲ್ಲಿ ಇರುವ ಪ್ರೋಬಯಾಟಿಕ್ಸ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಇದರಿಂದ ದೇಹದ ಕೊಬ್ಬು ನಿಧಾನವಾಗಿ ಕರಗಲು ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ ಸಮೃದ್ಧ – ಮೊಸರು ಹೇರಳವಾದ ಕ್ಯಾಲ್ಸಿಯಂ ಹೊಂದಿದ್ದು, ಇದು ದೇಹದ BMI (Body Mass Index) ನಿಯಂತ್ರಿಸಲು ನೆರವಾಗುತ್ತದೆ.

ಪ್ರೋಟೀನ್ ಹೆಚ್ಚಿರುವ ಆಹಾರ – ಜಿಮ್ ಅಥವಾ ಯೋಗ ಮಾಡುವವರಿಗೆ ಮೊಸರು ಅತ್ಯುತ್ತಮ ಆಯ್ಕೆ. ಕಡಿಮೆ ಕಾರ್ಬೋಹೈಡ್ರೇಟ್ ಹಾಗೂ ಹೆಚ್ಚಿನ ಪ್ರೋಟೀನ್ ಹೊಂದಿರುವುದರಿಂದ ತೂಕ ಇಳಿಕೆಗೆ ಇದು ಸಹಾಯಕ.
ಜಲಾಂಶ ಕಾಪಾಡುವುದು – ಮೊಸರು ದೇಹದ ತೇವಾಂಶವನ್ನು ಕಾಪಾಡುತ್ತದೆ. ಇದರಿಂದ ದೇಹ ಸದಾ ತಾಜಾವಾಗಿರುತ್ತದೆ ಹಾಗೂ ಚರ್ಮ-ಕೂದಲು ಹೊಳೆಯುತ್ತವೆ.
ಬಹುಮುಖ ಸೇವನೆ – ಸಾದಾ ಮೊಸರಿಗಿಂತ ವಿಭಿನ್ನ ರೀತಿಯಲ್ಲಿ ಸೇವಿಸಿದರೆ ಆರೋಗ್ಯಕರವಾಗಿದ್ದು, ರುಚಿಯುತವಾಗಿರುತ್ತದೆ. ಉದಾಹರಣೆಗೆ, ಒಣಹಣ್ಣುಗಳ ಜೊತೆ, ಕರಿಮೆಣಸಿನ ಪುಡಿಯ ಜೊತೆ, ಅನ್ನದ ಜೊತೆಗೆ ಅಥವಾ ಪರಾಠಾದೊಂದಿಗೆ ಸೇವಿಸಬಹುದು.

ತೂಕ ಇಳಿಸಲು ಅನೇಕ ಪ್ರಯತ್ನಗಳು ವಿಫಲವಾಗುತ್ತಿರುವವರಿಗೆ ಮೊಸರು ಒಂದು ಸುಲಭ, ಆರೋಗ್ಯಕರ ಹಾಗೂ ಪರಿಣಾಮಕಾರಿ ಪರಿಹಾರ. ದಿನನಿತ್ಯದ ಆಹಾರದಲ್ಲಿ ಮೊಸರನ್ನು ಸೇರಿಸುವುದರಿಂದ ದೇಹದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ, ಕೊಬ್ಬು ಕರಗಲು ನೆರವಾಗುತ್ತದೆ ಹಾಗೂ ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಹೀಗಾಗಿ ತೂಕ ನಿಯಂತ್ರಿಸಲು ಬಯಸುವವರು ಪ್ರತಿದಿನ ಮೊಸರು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.