ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇತ್ತೀಚೆಗೆ ನಡೆದ 2025ರ ಮಹಿಳಾ ವಿಶ್ವಕಪ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಅಂತರದಿಂದ ಜಯ ಸಾಧಿಸಿದ ಭಾರತ ಮಹಿಳಾ ತಂಡದ ಈ ಸಾಧನೆ ರಾಷ್ಟ್ರವ್ಯಾಪಿ ಸಂಭ್ರಮಕ್ಕೆ ಕಾರಣವಾಗಿದೆ. ಈ ವಿಜಯದ ಹಿನ್ನಲೆಯಲ್ಲಿ ಆಟಗಾರ್ತಿಯರ ಮೇಲೆ ಪ್ರಶಸ್ತಿಗಳ ಸುರಿಮಳೆ ಸುರಿಯುತ್ತಿದ್ದು, ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತ್ತೊಂದು ವಿಶಿಷ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಡಾರ್ಜಿಲಿಂಗ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ವಿಶ್ವಕಪ್ ವಿಜೇತ ತಂಡದ ವಿಕೆಟ್‌ಕೀಪರ್-ಬ್ಯಾಟರ್ ರಿಚಾ ಘೋಷ್ ಅವರ ಹೆಸರನ್ನು ಇಡಲು ತೀರ್ಮಾನಿಸಿದ್ದಾರೆ. ಸಿಲಿಗುರಿಗೆ ಸೇರಿದ ರಿಚಾ ಘೋಷ್ ತಮ್ಮ ಅಸಾಧಾರಣ ಆಟದಿಂದ ವಿಶ್ವಕಪ್‌ನಲ್ಲಿ ಗಮನ ಸೆಳೆದಿದ್ದು, ಕೇವಲ 22 ವರ್ಷ ವಯಸ್ಸಿನಲ್ಲೇ ಅವರು ಭಾರತವನ್ನು ವಿಶ್ವಚಾಂಪಿಯನ್ ಪಟ್ಟಕ್ಕೇರಿಸಲು ಪ್ರಮುಖ ಪಾತ್ರವಹಿಸಿದ್ದರು.
ಈ ಕುರಿತು ಮಾತನಾಡಿದ ಮಮತಾ ಬ್ಯಾನರ್ಜಿ, “ರಿಚಾ ಘೋಷ್ ಕೇವಲ 22 ವರ್ಷ ವಯಸ್ಸಿನಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಪಶ್ಚಿಮ ಬಂಗಾಳದ ಹೆಮ್ಮೆಯ ಪುತ್ರಿಯಾಗಿ ಅವರನ್ನು ಗೌರವಿಸಲು ರಾಜ್ಯ ಸರ್ಕಾರವು ಹೊಸ ಕ್ರೀಡಾಂಗಣಕ್ಕೆ ಅವರ ಹೆಸರನ್ನು ಇಡಲು ನಿರ್ಧರಿಸಿದೆ. ಡಾರ್ಜಿಲಿಂಗ್‌ನ ಚಂದ್ಮುಣಿ ಟೀ ಎಸ್ಟೇಟ್‌ನ 27 ಎಕರೆ ಭೂಮಿಯಲ್ಲಿ ಈ ಕ್ರಿಕೆಟ್ ಮೈದಾನ ನಿರ್ಮಾಣವಾಗಲಿದೆ. ಮುಂದಿನ ಪೀಳಿಗೆಗಳು ರಿಚಾ ಅವರ ಸಾಧನೆಗಳಿಂದ ಸ್ಫೂರ್ತಿ ಪಡೆಯಲಿ ಎಂಬುದು ನಮ್ಮ ಆಶಯ,” ಎಂದು ಹೇಳಿದರು.

