Sunday, October 12, 2025

ಜಡೇಜಾ ಬೌಲಿಂಗ್ ಗೆ ಮಂಕಾದ ವೆಸ್ಟ್ ಇಂಡೀಸ್: ಎರಡನೇ ದಿನದಾಟ ಅಂತ್ಯಕ್ಕೆ140/4

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಮುಕ್ತಾಯಗೊಂಡಿದೆ.

ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು ಐದು ವಿಕೆಟ್ ನಷ್ಟಕ್ಕೆ 518 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ವೆಸ್ಟ್ ಇಂಡೀಸ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಭಾರತಕ್ಕಿಂತ 378 ರನ್ ಹಿನ್ನಡೆಯಲ್ಲಿದೆ. ಆಟದ ಅಂತ್ಯಕ್ಕೆ ಶೈ ಹೋಪ್ 31 ರನ್ ಗಳಿಸಿದರೆ, ಟೆವಿನ್ ಇಮ್ಲಾಚ್ 14 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಭಾರತದ ಪರ ರವೀಂದ್ರ ಜಡೇಜಾ ಮೂರು ವಿಕೆಟ್ ಕಬಳಿಸಿದ್ದರೆ, ಕುಲ್ದೀಪ್ ಯಾದವ್ ಒಂದು ವಿಕೆಟ್ ಪಡೆದಿದ್ದಾರೆ.

ಭಾರತದ ಪರ ಯಶಸ್ವಿ ಜೈಸ್ವಾಲ್ 175 ರನ್ ಗಳಿಸಿದರೆ, ನಾಯಕ ಶುಭ್ ಮನ್ ಗಿಲ್ ಅಜೇಯ 129 ರನ್ ಗಳಿಸಿದರೆ, ಸಾಯಿ ಸುದರ್ಶನ್ 87 ರನ್, ಕೆಎಲ್ ರಾಹುಲ್ 38 ರನ್, ನಿತೀಶ್ ಕುಮಾರ್ ರೆಡ್ಡಿ 43 ರನ್ ಮತ್ತು ದ್ರುವ್ ಜುರೆಲ್ 44 ರನ್ ಕಲೆಹಾಕಿದ್ದಾರೆ.

ಇತ್ತ ಬಳಿಕ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್‌ ತಂಡಕ್ಕೆ ಆಘಾತ ಎದುರಾಯಿತು. ಆರಂಭಿಕ ಜಾನ್ ಕ್ಯಾಂಪ್‌ಬೆಲ್ 10 ರನ್ ಗಳಿಸಿ ಔಟಾದರು. ನಂತರ ತೇಜ್‌ನಾರಾಯಣ್ ಚಂದ್ರಪಾಲ್ ಮತ್ತು ಅಲಿಕ್ ಅಥನಾಜೆ ಎರಡನೇ ವಿಕೆಟ್‌ಗೆ 66 ರನ್ ಜೊತೆಯಾಟವನ್ನಾಡಿದರು. ಆದರೆ ಜಡೇಜಾ, ಚಂದ್ರಪಾಲ್ ಅವರನ್ನು 34 ರನ್​ಗಳಿಗೆ ಪೆವಿಲಿಯನ್‌ಗಟ್ಟುವ ಮೂಲಕ ಈ ಜೊತೆಯಾಟ ಮುರಿದರು. ನಂತರ ಕುಲ್ದೀಪ್, ಅಥನಾಜೆ ವಿಕೆಟ್ ಪಡೆದು ವೆಸ್ಟ್ ಇಂಡೀಸ್‌ಗೆ ಮೂರನೇ ಹೊಡೆತ ನೀಡಿದರು. ಅಥನಾಜೆ 41 ರನ್ ಗಳಿಸಿ ಔಟಾದರು. ನಂತರ ಬಂದ ನಾಯಕ ರೋಸ್ಟನ್ ಚೇಸ್ ಖಾತೆ ತೆರೆಯದೆ ಜಡೇಜಾಗೆ ಬಲಿಯಾದರು.

error: Content is protected !!