Friday, November 21, 2025

ಏರ್ ಶೋನಲ್ಲಿ ತೇಜಸ್ ಪತನಕ್ಕೆ ಕಾರಣವೇನು? ಅಪಘಾತಕ್ಕೆ ‘ನೆಗೆಟಿವ್ ಜಿ’ ಒತ್ತಡ ಕಾರಣವೇ?

ಹೊಸದಿಗಂತ ಡಿಜಿಟಲ್ ಡೆಸ್ಕ್;

ದುಬೈನಲ್ಲಿ ಅಂತಾರಾಷ್ಟ್ರೀಯ ಏರ್ ಶೋನಲ್ಲಿ ಭಾರತದ ತೇಜಸ್ ಲಘು ಯುದ್ಧ ವಿಮಾನ ಪೈಲಟ್ ನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಅತಿ ವೇಗವಾಗಿ ಬಂದು ನೆಲಕ್ಕೆ ಅಪ್ಪಳಿಸಿದ ಕೂಡಲೇ ಧಗ್ಗನೆ ಬೆಂಕಿ ಹೊತ್ತಿಕೊಂಡಿದ್ದು ಅದರಲ್ಲಿದ್ದ ಪೈಲಟ್ ಸಾವಿಗೀಡಾಗಿದ್ದಾನೆ.

ಇದರ ಬೆನ್ನಲ್ಲೇ ವಿಮಾನ ಪತನದ ಬಗ್ಗೆ ತನಿಖೆ ಆರಂಭವಾಗಿದ್ದು ಅಪಘಾತಕ್ಕೆ ನಿಖರ ಕಾರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಅಪಘಾತಕ್ಕೆ ‘ನೆಗೆಟಿವ್ ಜಿ’ ಒತ್ತಡವನ್ನು ನಿಭಾಯಿಸುವಲ್ಲಿ ಪೈಲಟ್ ವಿಫಲರಾಗಿದ್ದಿರಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.

ಯುದ್ಧ ವಿಮಾನಗಳ ಚಾಲನೆಯಲ್ಲಿ ನುರಿತಿರುವ ಪೈಲಟ್ ಗಳು ಅಪಘಾತಕ್ಕೆ ಕಾರಣವಾಗಿರುವ ಅಂಶಗಳನ್ನು ಅದಾಗಲೇ ಅಂದಾಜಿಸಿದ್ದಾರೆ. ಅವರು ಪ್ರಕಾರ, ತೇಜಸ್ ಯುದ್ಧ ವಿಮಾನದ ಪೈಲಟ್, ಅದೊಂದು ‘ಒತ್ತಡ’ವನ್ನು ನಿಭಾಯಿಸುವಲ್ಲಿ ಎಡವಿದ್ದರಿಂದಲೇ ಈ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.

ಏನಿದು ನೆಗೆಟಿವ್-ಜಿ?
ಯುದ್ಧ ವಿಮಾನಗಳನ್ನು ಚಲಾಯಿಸುವಾಗ ಅವುಗಳನ್ನು ವಾಯುಮಂಡಲದಲ್ಲಿ ಗಿರಕಿ ಹೊಡೆಸುವುದು, ಮೇಲ್ಮುಖವಾಗಿ ಆಕಾಶದ ಕಡೆಗೆ ಬಾಣದಂತೆ ಹೋಗುವುದು, ಅಲ್ಲಿಂದ ಮತ್ತೆ ಕೆಳಮುಖವಾಗಿ ಬಾಣದಂತೆ ನೆಲದ ಕಡೆಗೆ ಅತಿ ವೇಗವಾಗಿ ಸಾಗಿ ಬರುವುದನ್ನು ನಾವು ನೋಡಿದ್ದೇವಲ್ಲವೇ? ಈ ಎರಡೂ ಪ್ರಕ್ರಿಯೆಗಳಲ್ಲಿ ಎರಡು ಪ್ರತ್ಯೇಕವಾದ ಒತ್ತಡಗಳು ಪೈಲಟ್ ನ ಮೇಲೆ ಉಂಟಾಗುತ್ತದೆ. ಒಂದು – ‘ಪಾಸಿಟಿವ್ ಜಿ’ ಮತ್ತೊಂದು ‘ನೆಗೆಟಿವ್ ಜಿ’.

ವಿಮಾನವನ್ನು ಮೇಲ್ಮುಖವಾಗಿ ಚಲಿಸುತ್ತಾ ವೇಗವಾಗಿ ಆಕಾಶದ ಕಡೆಗೆ ಹೋಗುವಾಗ, ಭೂಮಿಯ ಸಹಜವಾದ ಗುರುತ್ವಾಕರ್ಷಣೆಯು ಆ ವಿಮಾನವನ್ನು ಕೆಳಕ್ಕೆಳೆಯುತ್ತಿರುತ್ತದೆ. ಆದರೆ, ವಿಮಾನದ ಯಾಂತ್ರಿಕ ಶಕ್ತಿಯು ಆ ವಿಮಾನವನ್ನು ಆ ಗುರುತ್ವಾಕರ್ಷಣೆಯ ವಿರುದ್ಧ ದಿಕ್ಕಿನಲ್ಲಿ ವಿಮಾನವನ್ನು ಕೊಂಡೊಯ್ಯುತ್ತದೆ. ಈ ಎರಡೂ ಶಕ್ತಿಗಳು ಹೀಗೆ ತದ್ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವಾಗ ವಿಮಾನದೊಳಕ್ಕೆ ಕುಳಿತಿದ್ದ ಪೈಲಟ್ ನ ದೇಹದಲ್ಲಿನ ರಕ್ತ ಸಂಚಾರದಲ್ಲಿ ಏರುಪೇರಾಗುತ್ತದೆ. ವಿಮಾನ ಹೀಗೆ ಮೈಲ್ಮುಖವಾಗಿ ಸಾಗುವಾಗ ಇಡೀ ದೇಹದ ರಕ್ತವು ಆತನ ಕಾಲುಗಳ ಕಡೆಗೆ ಹರಿದುಬರುತ್ತದೆ. ಮೆದುಳಿನಲ್ಲಿರುವ ರಕ್ತ ಕೂಡ ಮೆದುಳಿನಿಂದ ಎದೆ, ಹೊಟ್ಟೆಯ ಕಡೆಗೆ ಪ್ರವಹಿಸುತ್ತದೆ. ಇದು ಪಾಸಿಟಿವ್ ಜಿ ಒತ್ತಡದಲ್ಲಿ ಆಗುವ ಪ್ರಕ್ರಿಯೆ.

ಆದರೆ, ‘ನೆಗೆಟಿವ್ ಜಿ’ ನಲ್ಲಿ ಇದಕ್ಕೆ ಉಲ್ಟಾ ಆಗುತ್ತದೆ. ಯಾವಾಗ ಯುದ್ಧ ವಿಮಾನವನ್ನು ಪೈಲಟ್, ಅತಿ ಎತ್ತರದಿಂದ ಭೂಮಿಯ ಕಡೆಗೆ ತಿರುಗಿಸಿ ಬಾಣದಂತೆ ತೂರಿಕೊಂಡು ಬರುತ್ತಾನೋ ಆಗ ಭೂಮಿಯ ಗುರುತ್ವಾಕರ್ಷಣ ಶಕ್ತಿಯೊಂದಿಗೆ ಆ ವಿಮಾನದ ಚಲನಶಕ್ತಿಯೂ ಸೇರಿ ಸ್ಪೀಡ್ ದ್ವಿಗುಣಗೊಳ್ಳುತ್ತದೆ. ಆದರೆ, ವಿಮಾನದ ಯಾಂತ್ರಿಕ ಶಕ್ತಿಯು ಒಂದು ಹಂತಕ್ಕೆ ವಿಮಾನವನ್ನು ಮೇಲಕ್ಕೆ ಪುಲ್ ಮಾಡುತ್ತಿರುತ್ತದೆ. ಆದರೆ, ಗುರುತ್ವಾಕರ್ಷಣ ಶಕ್ತಿಯಿಂದಾಗಿ ಯುದ್ಧ ವಿಮಾನ ಅತ್ಯಂತ ವೇಗವಾಗಿ ಭೂಮಿಯ ಕಡೆ ಸಾಗುತ್ತಿರುತ್ತದೆ. ಈ ಸಂದರ್ಭದಲ್ಲಿ, ವಿಮಾನದಲ್ಲಿದ್ದ ಪೈಲಟ್ ನ ದೇಹದಲ್ಲಿ ರಕ್ತ ಸಂಚಾರ ಮತ್ತೆ ಏರುಪೇರಾಗುತ್ತದೆ. ಕಾಲಿನ ಕಡೆಯಲ್ಲಿದ್ದ ರಕ್ತವೆಲ್ಲಾ ಮೆದುಳಿನ ಕಡೆಗೆ ಹರಿಯುತ್ತದೆ. ಆಗ ಮೆದುಳಿನಲ್ಲಿ ಹೆಚ್ಚಿನ ರಕ್ತ ಸಂಗ್ರಹವಾಗುವುದರಿಂದ ಪೈಲಟ್ ಒಂದು ಕ್ಷಣ ಮಂಕಾಗಿಬಿಡುತ್ತಾನೆ, ಏನು ಮಾಡುತ್ತಿದ್ದೀನಿ, ಮುಂದೇನು ಮಾಡಬೇಕು ಎಂಬ ಸ್ಥಿತಪ್ರಜ್ಞತೆಯನ್ನು ಕಳೆದುಕೊಂಡು ಬಿಡುತ್ತಾನೆ. ಒಂದು ಸೆಕೆಂಡ್ ಅವಧಿಯಲ್ಲಿ ಹೀಗೆ ಪೈಲಟ್ ಸುಮ್ಮನೇ ಕುಳಿತರೂ ವಿಮಾನ ನೆಲದ ಸಮೀಪಕ್ಕೆ ಬಂದುಬಿಟ್ಟಿರುತ್ತದೆ. ಅದಕ್ಕೆ ಅವಕಾಶ ಕೊಡದಂತೆ, ಒಂದು ಸೆಕೆಂಡ್ ಅಲ್ಲ, ಒಂದೇ ಒಂದು ಮಿಲಿಸೆಕೆಂಡ್ ಕೂಡ ಏಕಾಗ್ರತೆಯನ್ನು ಕಳೆದುಕೊಳ್ಳದೇ ವಿಮಾನವನ್ನು ನಿಯಂತ್ರಿಸಬೇಕು.

ದುಬೈನಲ್ಲಿ ಪತನವಾದ ತೇಜಸ್ ಯುದ್ಧ ವಿಮಾನದಲ್ಲಿದ್ದ ಪೈಲಟ್ ಗೆ ಈ ನೆಗೆಟಿವ್ ಜಿ ಒತ್ತಡದಿಂದ ಒಂದು ಕ್ಷಣವಾದರೂ ಆತ ಏಕಾಗ್ರತೆಯನ್ನು ಕಳೆದುಕೊಂಡು, ಅರೆಪ್ರಜ್ಞಾವಸ್ಥೆಗೆ ಜಾರಿದ್ದರಿಂದ ನೆಲಕ್ಕೆ ಸಮೀಪಿಸುತ್ತಿರುವ ವಿಮಾನವನ್ನು ಪುನಃ ಪುಲ್ ಮಾಡಿ ನೆಲಕ್ಕೆ ಸಮಾನಾಂತರವಾಗಿ ಚಲಿಸುವಂತೆ ಮಾಡಿಬಿಡೋಣ ಎನ್ನುವಷ್ಟರಲ್ಲಿ ಅದು ನೆಲಕ್ಕೆ ಅಪ್ಪಳಿಸಿದೆ. ಪೈಲಟ್ ಗಳನ್ನು ಮಂಕಾಗಿಸುವ, ‘ನೆಗೆಟಿವ್ – ಜಿ’ ಪ್ರೆಶರ್ ತುಂಬಾ ಡೇಂಜರ್ ಎಂದು ತಜ್ಞರು ಹೇಳುತ್ತಾರೆ.

error: Content is protected !!