ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (PTI) ಸಂಸ್ಥಾಪಕ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ವದಂತಿಗಳ ಬೆನ್ನಲ್ಲೇ ಇದೀಗ ಪಾಕಿಸ್ತಾನ ಸರ್ಕಾರ ಜೈಲಿನಲ್ಲಿ ಇಮ್ರಾನ್ ಖಾನ್ ಭೇಟಿಯಾಗಲು ಅವರ ಸಹೋದರಿಗೆ ಅವಕಾಶ ನೀಡಿದೆ.
ಇದೀಗ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿಯಾದ ಉಜ್ಮಾ ಖಾನಮ್, “ಅಣ್ಣ ಚೆನ್ನಾಗಿದ್ದಾರೆ, ಫಿಟ್ ಆಗಿದ್ದಾರೆ ಮತ್ತು ಜೀವಂತವಾಗಿದ್ದಾರೆ” ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಆರೋಪಿಸಿ ಪಿಟಿಐ ಇಸ್ಲಾಮಾಬಾದ್ ಹೈಕೋರ್ಟ್ ಮತ್ತು ಅಡಿಯಾಲ ಜೈಲಿನ ಹೊರಗೆ ಪ್ರತಿಭಟನೆ ನಡೆಸಿದ ನಂತರ ಈ ಭೇಟಿ ನಡೆಯಿತು. ಇಮ್ರಾನ್ ಖಾನ್ ಕುಟುಂಬ ಸದಸ್ಯರು ಮತ್ತು ಪಕ್ಷದ ಹಿರಿಯ ನಾಯಕರಿಗೆ ಹಲವಾರು ವಾರಗಳವರೆಗೆ ಅವರನ್ನು ಭೇಟಿ ಮಾಡಲು ಅವಕಾಶ ನೀಡಿರಲಿಲ್ಲ ಎಂದು ಪಕ್ಷ ಹೇಳಿಕೊಂಡಿತ್ತು. ಕಳೆದ ವಾರ, ಇಮ್ರಾನ್ ಖಾನ್ ಅವರ ಮಗ ಮತ್ತು ಸಹೋದರಿ ಇಬ್ಬರೂ ಜೈಲಿನಲ್ಲಿರುವ ಪಿಟಿಐ ಸಂಸ್ಥಾಪಕ ಜೀವಂತವಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಏತನ್ಮಧ್ಯೆ, ಜೈಲಿನಲ್ಲಿರುವಾಗ ಅವರ ಸ್ಥಿತಿಯ ಬಗ್ಗೆ ಊಹಾಪೋಹಗಳು ಹರಡಿದ್ದವು.
ಇದೀಗ ಅವರು ಚೆನ್ನಾಗಿದ್ದಾರೆ ಆದರೆ ತುಂಬಾ ಕೋಪಗೊಂಡಿದ್ದಾರೆ. ಜೈಲಿನಲ್ಲಿ ಅವರನ್ನು ಮಾನಸಿಕ ಹಿಂಸೆಗೆ ಒಳಪಡಿಸುತ್ತಿದ್ದಾರೆ. ಯಾರೊಂದಿಗೂ ಸಂವಹನ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ನನ್ನ ಬಳಿ ಹೇಳಿದರು ಎಂದು ಉಜ್ಮಾ ಹೇಳಿದ್ದಾರೆ.
ಇಮ್ರಾನ್ ಖಾನ್ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೃಢೀಕರಿಸದ ಹೇಳಿಕೆಗಳು ತುಂಬಿ ತುಳುಕುತ್ತಿದ್ದವು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಜೊತೆಗೆ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಖಾನ್ ಹತ್ಯೆಗೆ ಸಂಚು ರೂಪಿಸಿದೆ ಎಂದು ಬಲೂಚಿಸ್ತಾನದ ವಿದೇಶಾಂಗ ಸಚಿವಾಲಯ ಆರೋಪಿಸಿದ ನಂತರ ಈ ಊಹಾಪೋಹಗಳು ತೀವ್ರಗೊಂಡಿತ್ತು.

