ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ. ಸಿ.ಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ತಾವೇ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ.
ಈ ಬಗ್ಗೆ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಂಎನ್ ಅರವಿಂದ್ ಮಾತನಾಡಿ, ಬುಲೆಟ್ ಸಿ.ಜೆ.ರಾಯ್ ಎದೆಯ ಎಡಭಾಗಕ್ಕೆ ಹೊಕ್ಕಿದೆ. ಅದು ದೇಹದಿಂದ ಹೊರಹೋಗದೆ ಒಳಗೆ ಉಳಿದಿದೆ. 6.35 ಮಿಲಿಮೀಟರ್ ಗಾತ್ರದ ಬುಲೆಟ್ ಹೃದಯ, ಶ್ವಾಸಕೋಶದ ಕೆಳಭಾಗ ಮತ್ತು ಡಯಾಫ್ರಮ್‌ಗೆ ಹಾನಿ ಮಾಡಿದೆ. ಬುಲೆಟ್ ಹಿಂದಿನ ಪಕ್ಕೆಲುಬುಗಳವರೆಗೆ ತಲುಪಿತ್ತು. ಸಿಜೆ ರಾಯ್ ಸಾವು ಗುಂಡಿನ ಗಾಯದಿಂದಲೇ ಆಗಿದೆ ಎಂದು ಅವರು ತಿಳಿಸಿದ್ದಾರೆ.
ರಕ್ತದ ಮಾದರಿ ಮತ್ತು ಗುಂಡು ಹಾರಿದ ಬಗ್ಗೆ ಬೆರಳಚ್ಚು ಪರೀಕ್ಷೆಗಾಗಿ ಕೈ ಮತ್ತು ಬೆರಳಿನ ಮಾದರಿಗಳನ್ನು ಸಂಗ್ರಹಿಸಿ ಮೃತದೇಹದಿಂದ ಡಿಎನ್‌ಎ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಡಾ. ಅರವಿಂದ್ ಮಾಹಿತಿ ನೀಡಿದ್ದಾರೆ.
ವರದಿಯಲ್ಲೇನಿದೆ?
ಸಿಜೆ ರಾಯ್ ಅವರು ತಮ್ಮ ಬಲಗೈಯಿಂದ ಎದೆಯ ಎಡಭಾಗಕ್ಕೆ ಗನ್ ಇಟ್ಟು ಟ್ರಿಗರ್ ಒತ್ತಿದ್ದಾರೆ. ಅತ್ಯಂತ ಸಮೀಪದಿಂದ ಗುಂಡು ಹಾರಿಸಿಕೊಂಡಿದ್ದರಿಂದ ಎದೆಯ ಮೇಲ್ಭಾಗದ ಮಾಂಸಖಂಡಗಳು ಚದುರಿಲ್ಲ, ಬದಲಾಗಿ ಗುಂಡು ನೇರವಾಗಿ ದೇಹದೊಳಗೆ ಆಳವಾಗಿ ಇಳಿದಿದೆ. ಪಾಕೆಟ್ ಗನ್‌ನಿಂದ ಹಾರಿದ ಬುಲೆಟ್ ಹೃದಯವನ್ನು ಸೀಳಿ, ಶ್ವಾಸಕೋಶ ಮತ್ತು ರಕ್ತನಾಳಗಳ ಮೂಲಕ ಹಾದುಹೋಗಿ ಕೊನೆಗೆ ಬೆನ್ನಿನ 11ನೇ ಪಕ್ಕೆಲುಬಿನ ಬಳಿ ಸಿಲುಕಿಕೊಂಡಿದೆ.
ಆತ್ಮಹತ್ಯೆಗೆ ಬಳಸಲಾದ NP bore 0.25 ಪಿಸ್ತೂಲ್ ಸಿಜೆ ರಾಯ್ ಅವರ ಹೆಸರಿನಲ್ಲೇ ಪರವಾನಗಿ ಪಡೆದಿದ್ದ ಆಯುಧ ಎಂಬುದು ಖಚಿತವಾಗಿದೆ. ಪೊಲೀಸರು ಈ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಸಿಜೆ ರಾಯ್ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ. ಅವರ ಮೊಬೈಲ್ ಫೋನ್‌ನ ಡೇಟಾ ಪಡೆಯಲು ಸಿಐಡಿ ಸೈಬರ್ ಸೆಲ್‌ಗೆ ಕಳುಹಿಸಲಾಗಿದೆ.



