Friday, November 28, 2025

ಪ್ರೀತಿ-ವಿಶ್ವಾಸವಿಲ್ಲದ ಬದುಕಿಗೆ ಅರ್ಥವೇನು?: ಪಾನ್‌ ಮಸಾಲಾ ಉದ್ಯಮಿಯ ಸೊಸೆ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕಮಲಾ ಪಸಂದ್’ ಮತ್ತು ‘ರಾಜಶ್ರೀ’ ಪಾನ್ ಮಸಾಲಾ ಬ್ರ್ಯಾಂಡ್‌ಗಳ ರೂವಾರಿ, ಉದ್ಯಮಿ ಕಮಲ್ ಕಿಶೋರ್ ಚೌರಾಸಿಯಾ ಅವರ ಕುಟುಂಬವು ದಿಢೀರ್ ದುರಂತಕ್ಕೆ ಒಳಗಾಗಿದೆ. ಅವರ ಸೊಸೆ, ದೀಪ್ತಿ ಚೌರಾಸಿಯಾ (40) ಅವರು ದಕ್ಷಿಣ ದೆಹಲಿಯ ಐಷಾರಾಮಿ ವಸಂತ್ ವಿಹಾರ್‌ನಲ್ಲಿರುವ ತಮ್ಮ ಕುಟುಂಬದ ನಿವಾಸದಲ್ಲಿ ನಿನ್ನೆ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾನ್ ಮಸಾಲಾ ಉದ್ಯಮಿಗಳ ವಲಯದಲ್ಲಿ ‘ಪಾನ್ ಮಸಾಲಾ ದೊರೆ’ ಎಂದೇ ಜನಪ್ರಿಯರಾದ ಕಮಲ್ ಕಿಶೋರ್ ಅವರ ಮಗ ಅರ್ಪಿತ್ ಚೌರಾಸಿಯಾ ಅವರ ಪತ್ನಿಯಾದ ದೀಪ್ತಿ ಅವರು, ದುಪಟ್ಟಾವನ್ನು ಬಳಸಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಡೆತ್ ನೋಟ್‌ನಲ್ಲಿ ನೋವಿನ ನುಡಿಗಳು

ದೀಪ್ತಿ ಅವರು ಆತ್ಮಹತ್ಯೆಗೂ ಮುನ್ನ ಡೆತ್ ನೋಟ್‌ ಒಂದನ್ನು ಬರೆದಿದ್ದು, ಅದರಲ್ಲಿನ ಒಂದು ವಾಕ್ಯ ಎಲ್ಲರ ಗಮನ ಸೆಳೆದಿದೆ. ಅವರು “ಸಂಬಂಧದಲ್ಲಿ ಪ್ರೀತಿ ಮತ್ತು ವಿಶ್ವಾಸವಿಲ್ಲದಿದ್ದರೆ, ಜೀವನದ ಅರ್ಥವೇನು?” ಎಂದು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ. ಆದರೆ, ತಮ್ಮ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೀಪ್ತಿ ಮತ್ತು ಅರ್ಪಿತ್ ಅವರು 2010 ರಲ್ಲಿ ವಿವಾಹವಾಗಿದ್ದು, ದಂಪತಿಗೆ 14 ವರ್ಷದ ಮಗ ಮತ್ತು ಐದು ವರ್ಷದ ಮಗಳು ಇದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಂಡವು ಮರಣೋತ್ತರ ಪರೀಕ್ಷೆಯನ್ನು ನಡೆಸಲಿದೆ. ಈ ದುರಂತ ಪ್ರಕರಣದ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಸಾರ್ವಜನಿಕ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

error: Content is protected !!