January16, 2026
Friday, January 16, 2026
spot_img

ನಮ್ಮ ಕನ್ನಡ ಧ್ವಜದಲ್ಲಿ ಹಳದಿ-ಕೆಂಪು ಬಣ್ಣವನ್ನೇ ಬಳಸಿರೋದು ಯಾಕೆ?

ನವೆಂಬರ್ 1 ಕನ್ನಡಿಗರ ಹೃದಯದಲ್ಲಿ ಹೆಮ್ಮೆ, ಸಂಭ್ರಮ ಮತ್ತು ಸಾಂಸ್ಕೃತಿಕ ಏಕತೆಯ ದಿನ. ಇದೇ ದಿನವನ್ನು “ಕನ್ನಡ ರಾಜ್ಯೋತ್ಸವ” ಅಥವಾ “ನಾಡ ಹಬ್ಬ” ಎಂದು ರಾಜ್ಯದಾದ್ಯಂತ ಭರ್ಜರಿಯಾಗಿ ಆಚರಿಸಲಾಗುತ್ತದೆ. ಹಳದಿ ಮತ್ತು ಕೆಂಪು ಬಣ್ಣದ ಧ್ವಜಗಳು ನಾಡಿನ ಪ್ರತಿ ಮೂಲೆಮೂಲೆಯಲ್ಲೂ ಹಾರಾಡುತ್ತವೆ, ಕಚೇರಿಗಳಲ್ಲಿ ಧ್ವಜಾರೋಹಣ ನಡೆಯುತ್ತದೆ, ಕನ್ನಡ ನುಡಿಗಾನಗಳು ಮೊಳಗುತ್ತವೆ. ಆದರೆ ಈ ಹಬ್ಬದ ಹಿಂದಿನ ಅರ್ಥ, ಕನ್ನಡ ಧ್ವಜದ ಮೂಲ ಮತ್ತು ಕರ್ನಾಟಕ ರಾಜ್ಯದ ರೂಪುಗೊಂಡ ಕಥೆ ಅನೇಕರಿಗೆ ಅಷ್ಟಾಗಿ ತಿಳಿದಿಲ್ಲ. ಈ ಹಿನ್ನೆಲೆಯೇ ರಾಜ್ಯೋತ್ಸವದ ನಿಜವಾದ ಅರ್ಥವನ್ನು ಬಿಚ್ಚಿಡುತ್ತದೆ.

ಕನ್ನಡ ಧ್ವಜದ ಹಿನ್ನೆಲೆ ಮತ್ತು ಅರ್ಥ:
ಕನ್ನಡ ಧ್ವಜವು ಕೆಂಪು ಮತ್ತು ಹಳದಿ ಬಣ್ಣದ ದ್ವಿ-ಬಣ್ಣದ ಧ್ವಜ. ಇದನ್ನು ಕನ್ನಡ ಬರಹಗಾರ ಮತ್ತು ಕಾರ್ಯಕರ್ತ ಮಾ. ರಾಮಮೂರ್ತಿ ಅವರು 1960ರ ದಶಕದಲ್ಲಿ ಕನ್ನಡ ಪಕ್ಷಕ್ಕಾಗಿ ರಚಿಸಿದರು. ನಂತರದಿಂದಲೇ ಈ ಧ್ವಜವು ಕರ್ನಾಟಕದ ಅನಧಿಕೃತ ರಾಜ್ಯ ಧ್ವಜವಾಗಿ ಜನಮನದಲ್ಲಿ ಸ್ಥಾನ ಪಡೆದಿತು. ಹಳದಿ ಬಣ್ಣವು ಅರಿಶಿನದ ಪವಿತ್ರತೆಯನ್ನು, ಕೆಂಪು ಬಣ್ಣವು ಕುಂಕುಮದ ಶಕ್ತಿಯನ್ನೂ ಪ್ರತಿನಿಧಿಸುತ್ತದೆ. ಇವುಗಳು ಒಟ್ಟಾಗಿ ಕರ್ನಾಟಕದ ಶುಭ, ಸೌಹಾರ್ದತೆ ಮತ್ತು ಯೋಗಕ್ಷೇಮದ ಸಂಕೇತಗಳಾಗಿವೆ.

ರಾಜ್ಯೋತ್ಸವದ ಇತಿಹಾಸ ಮತ್ತು ರಾಜ್ಯದ ಹೆಸರು ಬದಲಾವಣೆ:
1956ರ ನವೆಂಬರ್ 1ರಂದು ಭಾರತದಲ್ಲಿ ರಾಜ್ಯಗಳ ಪುನರ್‌ಘಟನೆಯಾಗುವ ಸಂದರ್ಭದಲ್ಲಿ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದಾಗಿಸಿ ‘ಮೈಸೂರು ರಾಜ್ಯ’ವೆಂಬ ಹೆಸರಿನಲ್ಲಿ ಹೊಸ ರಾಜ್ಯವನ್ನು ರಚಿಸಲಾಯಿತು. ನಂತರ 1973ರಲ್ಲಿ ತಾತ್ಕಾಲಿಕವಾಗಿ ಈ ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಬದಲಾಯಿಸಲಾಯಿತು. ಈ ಬದಲಾವಣೆ ಕನ್ನಡಿಗರ ಸಾಂಸ್ಕೃತಿಕ ಏಕತೆಯ ಸಂಕೇತವಾಗಿದ್ದು, ರಾಜ್ಯೋತ್ಸವದ ಮಹತ್ವವನ್ನು ಹೆಚ್ಚಿಸಿತು.

ರಾಜ್ಯೋತ್ಸವ ದಿನದಂದು ಕನ್ನಡ ಧ್ವಜವನ್ನು ಎಲ್ಲೆಡೆ ಹಾರಿಸಲಾಗುತ್ತದೆ. ಆದರೆ ಈ ಧ್ವಜವು ಜನಪ್ರಿಯತೆಯನ್ನು ಗಳಿಸಲು ಕಾರಣವಾದದ್ದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಟ ಡಾ. ರಾಜ್‌ಕುಮಾರ್ ಅವರ ಹಾಡುಗಳು. ಅವರು ಕನ್ನಡದ ಗೌರವವನ್ನು ಸಾರುವ ಹಲವು ಚಿತ್ರಗಳಲ್ಲಿ ಧ್ವಜ ಬೀಸಿದ ದೃಶ್ಯಗಳು ಜನಮನ ಸೆಳೆದವು.

2014ರಲ್ಲಿ ಹಿರಿಯ ಪತ್ರಕರ್ತ ಮತ್ತು ಕನ್ನಡ ಕಾರ್ಯಕರ್ತ ಪಾಟೀಲ್ ಪುಟ್ಟಪ್ಪ ಅವರು ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿ ರಾಜ್ಯಕ್ಕೆ ಪ್ರತ್ಯೇಕ ಅಧಿಕೃತ ಧ್ವಜ ನೀಡುವಂತೆ ಒತ್ತಾಯಿಸಿದರು. ಇದಕ್ಕಾಗಿ ಸರ್ಕಾರವು ಒಂಬತ್ತು ಸದಸ್ಯರ ಸಮಿತಿಯನ್ನು ರಚಿಸಿತು. ಆದರೆ ಈ ಪ್ರಯತ್ನ ರಾಜಕೀಯ ವಿವಾದಕ್ಕೆ ತುತ್ತಾಯಿತು. ಆದರೂ ಇದುವರೆಗೂ ಕರ್ನಾಟಕದ ಧ್ವಜಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆತಿಲ್ಲ.

Must Read

error: Content is protected !!