ಹೊಸದಿಗಂತ ವರದಿ ಕಲಬುರಗಿ:
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಸಹಕಾರಿ ಧುರೀಣ ಅಜಿತ್ ಪವಾರ್ ಅವರ ವಿಮಾನ ಅಪಘಾತದಲ್ಲಿ ಮರಣ ಹೊಂದಿರುವ ವಿಷಯ ಮನಸ್ಸಿಗೆ ತುಂಬಾ ಆಘಾತ ಉಂಟುಮಾಡಿದೆ ಎಂದು ಕಲಬುರಗಿ ಮಾಜಿ ಸಂಸದ ಡಾ.ಉಮೇಶ್ ಜಾಧವ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಮಹಾರಾಷ್ಟ್ರದಲ್ಲಿರುವ ಬಂಜಾರಾ ಸಮಾಜದ ಇಂದ್ರನಿಲ್ ನಾಯಕ್ ಅವರನ್ನು ಮಂತ್ರಿ ಮಾಡಿದ ಕೊಡುಗೆಯ ಋಣವನ್ನು ಸಮಾಜವು ಎಂದಿಗೂ ಮರೆಯುವುದಿಲ್ಲ.ಬಂಜಾರಾ ಸಮಾಜದ ಕಲ್ಯಾಣಕ್ಕಾಗಿ ಶ್ರಮ ಪಟ್ಟಿರುವ ಅಜಿತ್ ಪವಾರ್ ಅವರನ್ನು ಕಳೆದುಕೊಂಡು ಸಮಾಜಕ್ಕೆ ಕೂಡಾ ತುಂಬಲಾರದ ನಷ್ಟ ವಾಗಿದೆ ಎಂದರು.
ಬಾರಾಮತಿಯ ರಾಜಕೀಯ ಧುರೀಣ ಅಜಿತ್ ಪವಾರ್ ಮಹಾರಾಷ್ಟ್ರ ರಾಜ್ಯದಲ್ಲಿ ದೊಡ್ಡ ರಾಜಕೀಯ ಶಕ್ತಿಯಾಗಿ ಮಹಾನ್ ಕೊಡುಗೆ ನೀಡಿ ಸ್ಮರಣೀಯರಾಗಿದ್ದಾರೆ.ಎನ್ ಡಿಎ ಅಂಗ ಪಕ್ಷವಾಗಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ಮುಂಚೂಣಿಗೆ ತರುವಲ್ಲಿ ಇವರ ಪಾತ್ರ ಮಹತ್ತರವಾದುದು.ಅಗಲಿದ ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬದವರಿಗೆ ಅಗಲುವಿಕೆಯ ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.



