ಗರ್ಭಾವಸ್ಥೆ ಎನ್ನುವುದು ಮಹಿಳೆಯ ಜೀವನದ ಅತ್ಯಂತ ಸೂಕ್ಷ್ಮ ಹಂತ. ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುವ ಕಾರಣ ಶೀತ, ಕೆಮ್ಮು, ಜ್ವರದಂತಹ ಸಾಮಾನ್ಯ ಸಮಸ್ಯೆಗಳೂ ಹೆಚ್ಚು ಕಾಡಬಹುದು. ಆದರೆ ಈ ಸಂದರ್ಭದಲ್ಲಿ ಯಾವುದೇ ಔಷಧಿಗಳನ್ನು ಮನಬಂದಂತೆ ಸೇವಿಸುವುದು ತಾಯಿಗೂ ಗರ್ಭದಲ್ಲಿರುವ ಮಗುವಿಗೂ ಅಪಾಯಕಾರಿಯಾಗಬಹುದು. ಹೀಗಾಗಿ ಹೆಚ್ಚಿನ ಜಾಗ್ರತೆ ಅಗತ್ಯ.
ಶೀತ–ಕೆಮ್ಮು ಕಾಣಿಸಿಕೊಂಡರೆ ಮೊದಲಿಗೆ ವಿಶ್ರಾಂತಿ ಅತ್ಯಂತ ಮುಖ್ಯ. ಬಿಸಿ ನೀರು ಕುಡಿಯುವುದು, ಹಗುರವಾದ ಆಹಾರ ಸೇವಿಸುವುದು, ಆವಿ ತೆಗೆದುಕೊಳ್ಳುವುದು, ಉಪ್ಪು ನೀರಿನಿಂದ ಗಂಟಲು ತೊಳೆಯುವುದು ಮೊದಲ ಹಂತದ ಸುರಕ್ಷಿತ ಪರಿಹಾರಗಳಾಗಿವೆ. ತುಪ್ಪ ಅಥವಾ ಜೇನು ಜೊತೆ ಬಿಸಿ ನೀರು ಸೇವಿಸುವುದರಿಂದಲೂ ಗಂಟಲು ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
ಗರ್ಭಾವಸ್ಥೆಯಲ್ಲಿ ಯಾವುದೇ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೇ ಸೇವಿಸಬಾರದು. ಸಾಮಾನ್ಯವಾಗಿ ಬಳಸುವ ಕೆಲವು ಶೀತ–ಕೆಮ್ಮಿನ ಮಾತ್ರೆಗಳು ಕೂಡ ಮಗುವಿನ ಬೆಳವಣಿಗೆಗೆ ಹಾನಿ ಉಂಟುಮಾಡುವ ಸಾಧ್ಯತೆ ಇರುತ್ತದೆ. ಶೀತ ಅಥವಾ ಕೆಮ್ಮು ಎರಡು–ಮೂರು ದಿನಗಳಲ್ಲಿ ಕಡಿಮೆಯಾಗದೆ ಹೆಚ್ಚಾದರೆ ಅಥವಾ ಜ್ವರ ಜತೆಯಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ. ತಾಯಿಯ ಸ್ವಲ್ಪ ನಿರ್ಲಕ್ಷ್ಯವೂ ಮಗುವಿನ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಬಹುಮುಖ್ಯ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

