ಹೊಸದಿಗಂತ ಡಿಜಿಟಲ್ ಡೆಸ್ಕ್:
ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ‘ವಂದೇ ಮಾತರಂ’ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ದೇಶವು ಇಂದು ನಿರುದ್ಯೋಗ, ಬಡತನ, ಹಣದುಬ್ಬರ, ಮಾಲಿನ್ಯ, ರೈತರ ಬಿಕ್ಕಟ್ಟು ಸೇರಿ ನೂರಾರು ಸಮಸ್ಯೆಗಳಿಂದ ಬಳಲುತ್ತಿದೆ. ಈ ಸಂದರ್ಭದಲ್ಲಿ ವಂದೇ ಮಾತರಂ ಗೀತೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸುವ ಅಗತ್ಯವಿತ್ತೇ? ಎಂದು ಪ್ರಶ್ನಿಸಿದರು.
ವಂದೇ ಮಾತರಂ ಹಾಡಿಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಇಂದು ಚರ್ಚೆ ಆರಂಭಿಸಿದ ಮೋದಿ, ವಂದೇ ಮಾತರಂ ವಿರುದ್ಧ ಜಿನ್ನಾ ನಡೆಸಿದ ಪ್ರತಿಭಟನೆಯನ್ನ ನೆಹರು ಬೆಂಬಲಿಸಿದರು. ಕೊನೆಗೆ ಕಾಂಗ್ರೆಸ್ ಮುಸ್ಲಿಂ ಲೀಗ್‌ಗೆ ತಲೆಬಾಗಿ ತುಂಡು ಮಾಡಿದರು ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ತಿರುಗೇಟು ನೀಡಿದ ಪ್ರಿಯಾಂಕಾ ಗಾಂಧಿ ಸಂಸತ್ತಿನಲ್ಲಿ ವಂದೇ ಮಾತರಂ ಚರ್ಚೆ ಅಗತ್ಯವಿತ್ತೇ? ದೇಶದ ಪ್ರತಿಯೊಂದು ಭಾಗದಲ್ಲೂ ಈ ಗೀತೆ ಜೀವಂತವಾಗಿದೆ. ಬಿಜೆಪಿ ಸರ್ಕಾರ ಯಾವಾಗಲೂ ವರ್ತಮಾನ ಮತ್ತು ಭವಿಷ್ಯವನ್ನ ನೋಡಲು ಬಯಸುವುದಿಲ್ಲ ಹಿಂದಿನದ್ದನ್ನೇ ಕೆದಕುತ್ತದೆ. ಸದ್ಯ ಬಂಗಾಳ ಚುನಾವಣೆ ಸಮೀಪಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಈ ಬಗ್ಗೆ ಚರ್ಚೆ ಮಾಡುತ್ತಾ ಭಾವನೆ ಕೆರಳಿಸುತ್ತಿದೆ ಎಂದು ಕುಟುಕಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ, ಚರ್ಚಿಸಲು ಅನೇಕ ಮಹತ್ವದ ವಿಷಯಗಳಿರುವಾಗ ಸದನವು ರಾಷ್ಟ್ರೀಯ ಗೀತೆಯ ಬಗ್ಗೆ ಏಕೆ ಚರ್ಚೆ ನಡೆಸುತ್ತಿದೆ ಎಂದು ಪ್ರಶ್ನಿಸಿದರು. ನಾವು ಚರ್ಚಿಸುತ್ತಿರುವ ವಿಷಯವು ದೇಶದ ಆತ್ಮದ ಭಾಗವಾಗಿದೆ. ನಾವು ‘ವಂದೇ ಮಾತರಂ’ ಹೇಳಿದಾಗ ಅದು ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸುತ್ತದೆ. ಈ ಚರ್ಚೆ ವಿಚಿತ್ರವಾಗಿದೆ. ಈ ಹಾಡು ಜನರ ಹೃದಯದಲ್ಲಿ ಸ್ಥಾನ ಪಡೆದಿದೆ ಹಾಗಾದರೆ ಚರ್ಚೆಯ ಅಗತ್ಯವೇನು? ಎಂದು ಪ್ರಶ್ನಿಸಿದರು.
ಈ ಸರ್ಕಾರ ವರ್ತಮಾನ, ಭವಿಷ್ಯ ನೋಡಲು ಬಯಸುತ್ತಿಲ್ಲ. ಬರೀ ಹಿಂದಿನದ್ದೇ ಕೆದಕಿಕೊಂಡು ಕುಳಿತಿದೆ. ಮೋದಿ ಅವರು ಮೂರು ಬಾರಿ ಪ್ರಧಾನಿ ಆಗಿದ್ದಾಗಲೂ ಅವರ ನೀತಿಗಳು ದೇಶವನ್ನ ದುರ್ಬಲಗೊಳಿಸುತ್ತಲೇ ಇವೆ. ದೇಶವು ಸದ್ಯ ಹಣದುಬ್ಬರ, ನಿರುದ್ಯೋಗ, ರೈತರ ಬಿಕ್ಕಟ್ಟು ಇನ್ನೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಅಧಿಕಾರದಲ್ಲಿ ಇರುವವರೂ ಇದನ್ನ ಒಪ್ಪುತ್ತಿದ್ದಾರೆ. ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ಆಗುತ್ತಲೇ ಇದೆ. ಆದ್ರೆ ಅದ್ಯಾವುದಕ್ಕೂ ಪರಿಹಾರ ಸಿಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

