ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿರಾ ತಾಲೂಕಿನ ಹುಳಿಯಾರು ರಸ್ತೆಯಲ್ಲಿರುವ ಹುಯಿಲ್ ದೊರೆ ಸೇತುವೆ ಬಳಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತವೊಂದು ವಿಶಿಷ್ಟ ಸನ್ನಿವೇಶಕ್ಕೆ ಕಾರಣವಾಯಿತು. ಗೋಧಿ ತುಂಬಿದ್ದ ಲಾರಿಯೊಂದು ವೇಗವನ್ನು ನಿಯಂತ್ರಿಸಲಾಗದೆ ಪಲ್ಟಿಯಾದ ಪರಿಣಾಮ, ಸಾವಿರಾರು ಕೆಜಿ ಗೋಧಿ ರಸ್ತೆಯುದ್ದಕ್ಕೂ ಚೆಲ್ಲಿ ಹೋಯಿತು.
ಘಟನೆಯ ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ರಸ್ತೆಯ ಮೇಲೆ ಚೆಲ್ಲಿದ್ದ ಗೋಧಿಯನ್ನು ಚೀಲಗಳಲ್ಲಿ ತುಂಬಿಕೊಂಡು ಹೋಗಲು ಮುಗಿಬಿದ್ದ ಪ್ರಸಂಗ ನಡೆಯಿತು. ಅಪಘಾತದ ದೃಶ್ಯದ ಬದಲಿಗೆ, ‘ಗೋಧಿ ಸಂಗ್ರಹ’ದ ದೃಶ್ಯವೇ ಅಲ್ಲಿ ಪ್ರಧಾನವಾಗಿತ್ತು. ಕೆಲವರು ತಮ್ಮ ಕೈಲಾದಷ್ಟು ಗೋಧಿಯನ್ನು ಬಾಚಿಕೊಂಡು, ಚೀಲಗಳನ್ನು ತುಂಬಿಸಿಕೊಂಡು ತೆರಳಿದರು.
ಈ ಅವಘಡವು ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವ ಮುನ್ನವೇ ಗೋಧಿಯ ಬಹುಪಾಲು ಪಾಲು ‘ಸ್ಥಳೀಯರ ಪಾಲು’ ಆಗಿರುವುದು ಕಂಡುಬಂತು. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

