ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆದ ಹೃದಯಸ್ಪರ್ಶಿ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳೆಯನ್ನು ಇಷ್ಟಪಟ್ಟ ಸಹ-ಪ್ರಯಾಣಿಕಳಿಗೆ ಹುಡುಗಿಯೊಬ್ಬಳು ತನ್ನ ಬಳೆಯನ್ನೇ ನೀಡಿರುವ ಘಟನೆ ನಡೆದಿದೆ.
ರಿತು ಜೂನ್ ಎಂಬ ಯುವತಿ ಎಕ್ಸ್ (ಟ್ವಿಟರ್) ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಬ್ಯಾಂಗಲ್ ಫೋಟೋ ಕೇಳಿದ್ದಕ್ಕೆ ಹುಡುಗಿಯೊಬ್ಬಳು ಬಳೆಯನ್ನೇ ನೀಡಿರುವ ಘಟನೆ ನಡೆದಿದ್ದು, ಈ ಕುರಿತು ಮಹಿಳೆ ಮಾಡಿರುವ ಪೋಸ್ಟ್ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಕಿಯ ನಡೆಯನ್ನು ಹಲವರು ಕೊಂಡಾಂಡಿದ್ದಾರೆ.
ಒಂದು ದಿನ ಮೆಟ್ರೋದಲ್ಲಿ ಪ್ರಯಾಣಿಸುವಾಗ, ನನ್ನ ಪಕ್ಕದಲ್ಲಿ ಕುಳಿತಿದ್ದ ಹುಡುಗಿಯ ಕೈಯಲ್ಲಿದ್ದ ಚಿನ್ನದ ಬಳೆಯನ್ನು ನಾನು ಗಮನಿಸಿದೆ ಎಂದು ರಿತು ಬರೆದಿದ್ದಾರೆ. ಅದರ ಸುಂದರವಾದ ವಿನ್ಯಾಸ ರಿತು ಕಣ್ಣಿಗೆ ಬಿತ್ತು. ಅದು ತುಂಬಾ ಇಷ್ಟವಾದ ಕಾರಣ, ಆ ಬಳೆಯ ಫೋಟೋ ತೆಗೆದುಕೊಳ್ಳಬಹುದೇ ಎಂದು ಆ ಹುಡುಗಿಯನ್ನು ಕೇಳಿದಳು. ‘ಅದೇ ರೀತಿ ಇನ್ನೊಂದು ಬಳೆ ಮಾಡಿಸಲು ಇದರ ಫೋಟೋ ತೆಗೆದುಕೊಳ್ಳಬಹುದೇ ಎಂದು ನಾನು ಕೇಳಿದೆ’ ಎಂದು ರಿತು ಬರೆದಿದ್ದಾರೆ. ರಿತು ಕೇಳಿದ್ದು ಕೇವಲ ಒಂದು ಫೋಟೋ, ಆದರೆ ಆ ಹುಡುಗಿಯ ಉತ್ತರ ರಿತುಗೆ ಆಶ್ಚರ್ಯವನ್ನುಂಟು ಮಾಡಿತು.
ಆ ಹುಡುಗಿ ತಕ್ಷಣವೇ ಬಳೆಯನ್ನು ತೆಗೆದು ರಿತುಗೆ ಕೊಟ್ಟಳು. ಇದನ್ನು ನೋಡಿದರೆ ಅಕ್ಕಸಾಲಿಗನಿಗೆ ಮಾಡಲು ಸುಲಭವಾಗುತ್ತದೆ ಎಂದು ಹೇಳಿ ಆ ಬಳೆಯನ್ನು ರಿತು ಕೈಗೆ ಕೊಟ್ಟಳು. ಅಷ್ಟೇ ಅಲ್ಲ, ಅದು ಚಿನ್ನದಂತೆ ಕಂಡರೂ ಚಿನ್ನದ ಬಳೆಯಲ್ಲ ಎಂದು ಆ ಹುಡುಗಿ ಹೇಳಿದಳು.
ಅಪರಿಚಿತ ಹುಡುಗಿಯ ಈ ವರ್ತನೆಗೆ ರಿತು ನಿಜಕ್ಕೂ ದಂಗಾದಳು. ಆಕೆಯ ದಯೆಯ ನೆನಪಿಗಾಗಿ ಆ ಬಳೆಯನ್ನು ಯಾವಾಗಲೂ ಇಟ್ಟುಕೊಳ್ಳಲು ರಿತು ನಿರ್ಧರಿಸಿದ್ದಾಳೆ. ‘ಎಲ್ಲಾ ಮೆಟ್ರೋ ಪ್ರಯಾಣಗಳು ಕೆಟ್ಟ ಅನುಭವವನ್ನು ನೀಡುವುದಿಲ್ಲ’ ಎಂದೂ ರಿತು ಬರೆದಿದ್ದಾರೆ.
ಆ ಬಳೆ ಧರಿಸಿದ ಕೈಗಳ ಸುಂದರವಾದ ಚಿತ್ರವನ್ನೂ ರಿತು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ‘ಇಂಟರ್ನೆಟ್‌ನಲ್ಲಿ ಇಂದು ನೋಡಿದ ಅತ್ಯಂತ ಸುಂದರವಾದ ಘಟನೆ’ ಎಂದು ಒಬ್ಬರು ಬರೆದಿದ್ದಾರೆ.


