ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಅರಾಹ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಆಪರೇಷನ್ ಸಿಂಧೂರದಿಂದ ಪಾಕಿಸ್ತಾನವೂ ಚೇತರಿಸಿಕೊಳ್ಳಲಿಲ್ಲ, ಕಾಂಗ್ರೆಸ್ ಕೂಡ ಚೇತರಿಸಿಕೊಂಡಿಲ್ಲ,” ಎಂದು ಪ್ರಧಾನಿ ಮೋದಿ ತೀವ್ರ ವ್ಯಂಗ್ಯವಾಡಿದರು. ಗಾಂಧಿ ಕುಟುಂಬವನ್ನು “ರಾಜಪರಿವಾರ” ಎಂದು ಉಲ್ಲೇಖಿಸಿದ ಮೋದಿ, ಪಾಕಿಸ್ತಾನದಲ್ಲಿ ಸ್ಫೋಟಗಳು ಸಂಭವಿಸುತ್ತಿದ್ದಾಗ ಕಾಂಗ್ರೆಸ್ ನಾಯಕರು ನಿದ್ರೆ ಕಳೆದುಕೊಂಡಿದ್ದರು ಎಂದು ವ್ಯಂಗ್ಯವಾಡಿದರು.
ಮೋದಿಯವರು ತಮ್ಮ ಭಾಷಣದಲ್ಲಿ ಸಂವಿಧಾನದ 370ನೇ ವಿಧಿ ರದ್ದು ಮಾಡಿದ ನಿರ್ಧಾರವನ್ನು ತಮ್ಮ ಗ್ಯಾರಂಟಿ ಎಂದೂ, ಅದನ್ನು ಯಶಸ್ವಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಷ್ಠಾನಗೊಳಿಸಿರುವುದಾಗಿ ಹೇಳಿದರು. “ಉಗ್ರರನ್ನು ಅವರ ನೆಲದಲ್ಲೇ ಬಗ್ಗು ಬಡಿಯುತ್ತೇವೆ ಎಂಬ ನಮ್ಮ ಪ್ರತಿಜ್ಞೆಯನ್ನು ಆಪರೇಷನ್ ಸಿಂಧೂರ ಮೂಲಕ ನೆರವೇರಿಸಿದ್ದೇವೆ. ಈ ಯಶಸ್ಸು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ,” ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನೂ ಬಿಹಾರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಗೆ ಸಂಬಂಧಿಸಿದ ವಿವಾದದ ಬಗ್ಗೆ ಮಾತನಾಡಿದ ಅವರು, “ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮಾಡಲು ಕಾಂಗ್ರೆಸ್ ಎಂದಿಗೂ ಬಯಸಿರಲಿಲ್ಲ. ತೇಜಸ್ವಿ ಯಾದವ್ ತಮ್ಮ ಅವಕಾಶವನ್ನು ಕಳೆದುಕೊಳ್ಳದೆ ಮುಂದೆ ಬಂದರು. ಆದರೆ ಕಾಂಗ್ರೆಸ್ ತಮ್ಮ ರಾಜಕೀಯ ಹಿತಾಸಕ್ತಿ ಕಾಪಾಡಿಕೊಳ್ಳಲು ಅವರ ತಲೆಗೆ ಬಂದೂಕು ಇಟ್ಟು ಸಿಎಂ ಹುದ್ದೆ ಕಸಿದುಕೊಂಡಂತಾಗಿದೆ,” ಎಂದು ಟೀಕಿಸಿದರು.
ಮೋದಿಯವರು ಇಬ್ಬರು ಮೈತ್ರಿ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವೆ ಸಂಘರ್ಷ ಉಂಟಾಗಿದೆ ಎಂದು ಹೇಳಿದರು. “ಕಾಂಗ್ರೆಸ್‌ನ ಬೇಡಿಕೆಗಳು ಆರ್‌ಜೆಡಿ ಚುನಾವಣಾ ಪ್ರಣಾಳಿಕೆಯಲ್ಲಿ ಪರಿಗಣನೆಗೊಂಡಿಲ್ಲ. ಹೀಗಾಗಿ ಚುನಾವಣೆಯ ಬಳಿಕ ಈ ಮೈತ್ರಿ ಸರ್ಕಾರ ರಚನೆ ಮಾಡುವ ನಂಬಿಕೆ ನನಗಿಲ್ಲ,” ಎಂದು ಪ್ರಧಾನಿ ಹೇಳಿದರು.

